ಬೆಂಗಳೂರು: ಮನೆಯ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕನನ್ನು ಬೈಕ್ ನಲ್ಲಿ ಬಂದ ಅಪರಿಚತ ವ್ಯಕ್ತಿಗಳು ಅಪಹರಣ ಮಾಡಿರುವ ಘಟನೆ ಕೆಪಿ ಅಗ್ರಹಾರದ ಮಾಗಡಿ ರಸ್ತೆಯಲ್ಲಿ ಹಾಡಹಗಲೇ ನಡೆದಿದೆ.
ಭಾನುವಾರ ಮಧ್ಯಾಹ್ನ ಮಗುವಿನ ಅಪಹರಣ ನಡೆದಿದ್ದು, ಅಪಹರಣಕಾರರು ರೂ.35 ಲಕ್ಷ ಬೇಡಿಕೆಯಿಟ್ಟಿದ್ದಾರೆಂದು ತಿಳಿದುಬಂದಿದೆ.
ಪ್ರಕರಣ ಸಂಬಂಧ ನಗರ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚನೆ ಮಾಡಿದ್ದು, ಮಗುವಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಭಾನುವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ 5 ವರ್ಷದ ಬಾಲಕ ರಾಜೇಶ್ ನೆರೆಹೊರೆಯ ಮಕ್ಕಳೊಂದಿಗೆ ಮನೆಯ ಮುಂದೆ ಆಟವಾಡುತ್ತಿದ್ದ. ಮಗುವಿನ ತಾಯಿ ಹಾಗೂ ಚಿಕ್ಕಮ್ಮ ದೈನಂದಿನ ಕೆಲಸಗಳಲ್ಲಿ ಕಾರ್ಯಮಗ್ನರಾಗಿದ್ದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಬಂದಿರುವ ದುಷ್ಕರ್ಮಿಗಳು ಮಗುವನ್ನು ಅಪಹರಣ ಮಾಡಿದ್ದಾರೆ. ಬಳಿಕ ಇತರೆ ಮಕ್ಕಳು ಬಾಲಕನ ಮನೆಯವರಿಗೆ ಮಾಹಿತಿ ತಿಳಿಸಿದ್ದಾರೆಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ರಾತ್ರಿ 9.30ರ ಸುಮಾರಿಗೆ ದುಷ್ಕರ್ಮಿಗಳು ಬಾಲಕನ ತಂದೆಗೆ ಕರೆ ಮಾಡಿದ್ದಾರೆ. ಈ ವೇಳೆ ರೂ.35 ಲಕ್ಷ ನೀಡಿದರೆ ಮಗುವನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವುದಾಗಿ ಹೇಳಿ, ಫೋನ್ ಕಟ್ ಮಾಡಿದ್ದಾರೆ. ಬಳಿಕ ಬಾಲಕನ ತಂದೆ ಪುನಃ ಕರೆ ಮಾಡಿದರೆ ಫೋನ್ ಸಂಪರ್ಕಕ್ಕೆ ಸಿಕ್ಕಿಲ್ಲ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಶೇಷ ತನಿಖಾ ತಂಡವನ್ನು ರಚಿಸಿದ್ದು, ಸ್ಥಳೀಯ ಸಿಸಿಟವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಬಾಲಕನ ತಂದೆ ರಾಜೇಶ್ ಅವರು ಮಾತನಾಡಿ, ರಾಸಾಯನಿಕ ಕಂಪನಿಯೊಂದರಲ್ಲಿ ನಾನು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ತತವ್ಯದಲ್ಲಿದ್ದಾಗ ಅಪಹರಣಕಾರರು ನನ್ನ ಮೊಬೈಲ್'ಗೆ ಕರೆ ಮಾಡಿದ್ದರು. ಐದು ನಿಮಿಷಗಳ ಕಾಲ ಮಾತನಾಡಿದ್ದ ಅವರು, ರೂ.35 ಲಕ್ಷ ನೀಡಿದರೆ, ಮಗುವನ್ನು ಸುರಕ್ಷಿತವಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿದ್ದರು. ಬಳಿಕ ಮತ್ತೆ ಅದೇ ಸಂಖ್ಯೆಗೆ ಕರೆ ಮಾಡಿದರೆ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. ಫೋನ್ ನಲ್ಲಿ ಮಾತನಾಡಿದ ವ್ಯಕ್ತಿಯ ದನಿಯನ್ನು ಈ ಹಿಂದೆಂದೂ ಕೇಳಿರಲಿಲ್ಲ. ಆರೋಪಿಗಳು ನಮ್ಮ ಕುಟುಂಬಕ್ಕೆ ಪರಿಚಿತರೇ, ಅಲ್ಲವೇ ಎಂಬುದೂ ಕೂಡ ನನಗೆ ಗೊತ್ತಿಲ್ಲ. ನನ್ನ ಮಗನನ್ನು ರಕ್ಷಣೆ ಮಾಡಲು ಪೊಲೀಸರು ಸಾಕಷ್ಟು ಶ್ರಮ ಪಡುತ್ತಿದ್ದಾರೆಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics