ಬೆಂಗಳೂರು: ಬೈಕ್ ಸವಾರರನ್ನು ರಕ್ಷಿಸಲು ಹೋಗಿ ತಾನೇ ಅಪಘಾತಕ್ಕೀಡಾದ ಟಿಪ್ಪರ್ ಚಾಲಕ
ಬೆಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರನನ್ನು ಬದುಕಿಸ ಹೋಗಿ ಟಿಪ್ಪರ್ ಚಾಲಕನೊಬ್ಬ ತಾನೇ ಜೀವ ಬಿಟ್ಟ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ಕೆಂಗೇರಿ ಸಮೀಪದ ನೈಸ್ ರಸ್ತೆಯಲ್ಲಿ ಮಂಗಳವಾರ ಬೆಳಗಿನ ಜಾವ 1.45ರ ಸುಮಾರಿಗೆ ನಡೆದ ಘಟನೆಯಲ್ಲಿ ಟಿಪ್ಪರ್ ಚಾಲಕ ಬಿ.ಎಸ್.ರಾಘವೇಂದ್ರ (29) ಮೃತಪಟ್ಟಿದ್ದಾರೆ.
ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ನಿವಾಸಿಯಾಗಿರುವ ರಾಘವೇಂದ್ರ ಮುಂಜಾನೆ ಅಪಘಾತದಿಂದ ಬೈಕ್ ಸವಾರರು ರಸ್ತೆ ಬದಿ ಬಿದ್ದಿರುವುದನ್ನು ಗಮನಿಸಿದ್ದಾರೆ. ತಾನು ವಾಹನ ನಿಲ್ಲಿಸಿ ಘಟನೆ ನಡೆದ ಜಾಗಕ್ಕೆ ತೆರಳುವಾಗ ಅತಿ ವೇಗದಿಂದ ಬಂದ ಅಪರಿಚಿತ ವಾಹನವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಅವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮಂಗಳವಾರ ಬೆಳಗಿನ ಜಾವ ನೈಸ್ ರಸ್ತೆ ಸೇತುವೆಯಲ್ಲಿ ತೆರಳುತ್ತಿದ್ದ ಬೈಕ್ ಸವಾರರಾದ ಗಿರೀಶ್ ಮತ್ತು ಅಭಿಷೇಕ್ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿ ಬಿದ್ದಿದ್ದರು. ಇದನ್ನು ಗಮನಿಸಿದ್ದ ರಾಘವೇಂದ್ರ ತಮ್ಮ ಟಿಪ್ಪರ್ ಲಾರಿಯನ್ನು ನಿಲ್ಲಿಸಿ ಅವರಿಗೆ ನೆರವಾಗಲು ಹೋಗಿದ್ದಾರೆ. ಆದರೆ ವಿಧಿಯಾಟ ಬೇರೆಯೇ ಇದ್ದು ಬೈಕ್ ಸವಾರರನ್ನು ರಕ್ಷಿಸುವ ಮುನ್ನ ತಾವೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಕೆಂಗೇರಿ ಪೋಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು ಮೃತ ರಾಘವೇಂದ್ರ ಅವರ ಪಾರ್ಥಿವ ಶರೀರವನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಬೈಕ್ ಅಪಘಾತದಿಂದ ಗಾಯಗೊಂಡಿದ್ದ ಇಬ್ಬರೂ ಸಹ ಪ್ರಾಣಾಪಾಯದಿಂದ ಪಾರಾಗಿದ್ದಾರೆ.