ತಪ್ಪು ಪ್ರಶ್ನೆ ಪತ್ರಿಕೆ: ಪರೀಕ್ಷಾರ್ಥಿಗಳನ್ನು ಮನೆಗೆ ಕಳಿಸಿದ ವಿಟಿಯು
ಬೆಂಗಳೂರು: ಇಂಜಿನಿಯರಿಂಗ್ ನ ಮೆಕೆಟ್ರಾನಿಕ್ಸ್ ವಿಭಾಗದ 6 ನೇ ಸೆಮಿಸ್ಟರ್ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯ ಶಾಕ್ ನೀಡಿದೆ.
ಪ್ರಶ್ನೆ ಪತ್ರಿಕೆ ತಪ್ಪಾಗಿ ತಯಾರಿಸಿದ್ದು, ಈ ವಿಷಯ ತಿಳಿಯುತ್ತಿದ್ದಂತೆಯೇ ಪರೀಕ್ಷೆ ಬರೆಯಬೇಕಿದ್ದ ವಿದ್ಯಾರ್ಥಿಗಳನ್ನು ಮನೆಗೆ ವಾಪಸ್ ಕಳಿಸಲಾಗಿದೆ. ಮೆಕೆಟ್ರಾನಿಕ್ಸ್ ಸ್ಯಾಟಲೈಟ್ ಸಂವಹನ ವಿಷಯದ ಪ್ರಶ್ನೆಪತ್ರಿಕೆಯನ್ನು ತಪ್ಪಾಗಿ ತಯಾರಿಸಲಾಗಿದ್ದು, ವಿದ್ಯಾರ್ಥಿಗಳನ್ನು ಪರೀಕ್ಷಾ ಕೊಠಡಿಯಲ್ಲಿ ಒಂದು ಗಂಟೆ ಕಾಯಿಸಿದ ನಂತರ ಮನೆಗೆ ತೆರಳಲು ಸೂಚನೆ ನೀಡಿ ಪರೀಕ್ಷೆಯನ್ನು ಮುಂದೂಡಲಾಗಿದೆ.
ವಿಷಯ/ ಕೋರ್ಸ್ ನ ಕೋಡ್ ನಲ್ಲಿ ಗೊಂದಲ ಉಂಟಾಗಿದ್ದರಿಂದ ಪ್ರಶ್ನೆ ಪತ್ರಿಕೆ ತಪ್ಪಾಗಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ವಿಟಿಯು ಅಧಿಕಾರಿಯೊಬ್ಬರು ಹೇಳಿದ್ದಾರೆ. ಜು.9 ಕ್ಕೆ ಪರೀಕ್ಷೆಯನ್ನು ನಿಗದಿಪಡಿಸಲಾಗಿದೆ. ಆದರೆ ಮೆಕೆಟ್ರಾನಿಕ್ಸ್ ವಿಷಯವನ್ನು ವಿಟಿಯುವಿನ ಕೆಲವೇ ಕಾಲೇಜುಗಳಲ್ಲಿ ಬೋಧನೆ ಮಾಡಲಾಗುತ್ತಿದ್ದು, ಬೆಂಗಳೂರಿನಲ್ಲಿ ಒಂದೇ ಕಾಲೇಜಿನಲ್ಲಿ ಬೋಧನೆ ಮಾಡಲಾಗುತ್ತಿದೆ.