ನಾನು ಯಾರೆಂದು ಗೊತ್ತಾ?: ಕರ್ತವ್ಯ ನಿರತ ಪೊಲೀಸ್ ಮೇಲೆ ಕಾಂಗ್ರೆಸ್ ನಾಯಕನ ದರ್ಪ
ಬೆಂಗಳೂರು: ನೈತಿಕತೆಗೆ ವಿರುದ್ಧವಾಗಿ ನಡೆದಿದ್ದೂ ಅಲ್ಲದೆ, ಪ್ರಶ್ನಿಸಿದ ಪೊಲೀಸ್ ಮೇಲೆ ಅಧಿಕಾರದ ಬಲ ಪ್ರಯೋಗಿಸಿದ ಕಾಂಗ್ರೆಸ್ ನಾಯಕರೊಬ್ಬರು ದರ್ಪ ಪ್ರದರ್ಶಿಸಿರುವ ಘಟನೆ ಬುಧವಾರ ನಡೆದಿದೆ.
ಕೆಪಿಸಿಸಿ ಸದಸ್ಯ ಪಿ.ಎನ್ ಕೃಷ್ಣಮೂರ್ತಿಯವರು ಕರ್ತವ್ಯ ನಿರತ ಪೊಲೀಸ್ ಮೇಲೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆಂದು ತಿಳಿದುಬಂದಿದೆ.
ಪೊಲೀಸ್'ನ್ನು ಕಾಂಗ್ರೆಸ್ ನಾಯಕ ಪಿ.ಎನ್.ಕೃಷ್ಣ ಮೂರ್ತಿಯವರು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿರುವ ಪ್ರಕಾರ, ಟ್ರಾಫಿಕ್ ನಿಯಮ ಉಲ್ಲಂಘಿಸಿದ ಕೃಷ್ಣಮೂರ್ತಿಯವರನ್ನು ಕರ್ತವ್ಯ ನಿರತ ಪೊಲೀಸ್ ಒಬ್ಬರು ಕಾರನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ಈ ವೇಳೆ ಕೃಷ್ಣಮೂರ್ತಿಯವರ ಪರವಾಗಿ ಅವರ ಸಹಾಯಕ ಮಾತನಾಡಲು ಆರಂಭಿಸಿದ್ದಾರೆ. ಮಾತನಾಡುವ ವೇಳೆ ಕೃಷ್ಣಮೂರ್ತಿಯವರ ಕೆಪಿಸಿಸಿ ಸದಸ್ಯತ್ವದ ಕಾರ್ಡನ್ನು ಪೊಲೀಸರಿಗೆ ತೋರಿಸಿದ್ದಾರೆ.
ಈ ವೇಳೆ ಕಾರ್ಡ್ ನೋಡಿದ ಪೊಲೀಸ್, ಪರಿಶೀಲನೆ ನಡೆಸುತ್ತೇನೆಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೃಷ್ಣಮೂರ್ತಿಯವರ ಸಹಾಯಕ ಕೇವಲ ಸದಸ್ಯರಲ್ಲ, ದಾಸರಹಳ್ಳಿ ಅಭ್ಯರ್ಥಿಯಾಗಿದ್ದಾರೆ. ಅವರನ್ನು ಹೋಗಲಿ ಬಿಡಿ. ನೀನೊಬ್ಬ ಹೊರಗಿನವ. ನಿನ್ನ ಕರ್ತವ್ಯವನ್ನು ಹೇಗೆ ಮಾಡಬೇಕೆಂಬುದು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ.
ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ತೀವ್ರವಾಗಿ ಕೆಂಡಾಮಂಡಲಗೊಂಡ ಕೃಷ್ಣಮೂರ್ತಿಯವರು ತಾವೇ ಮಾತನಾಡಲು ಆರಂಭಿಸಿ, ನಾನು ಯಾರು ಎಂಬುದು ನಿನಗೆ ಗೊತ್ತಿಲ್ಲವೇ? ಮೂರ್ಖ ಎಂದು ಅವಾಚ್ಯ ಶಬ್ದಗಳಿಂದ ಪೊಲೀಸ್'ನನ್ನು ನಿಂದಿಸಲು ಆರಂಭಿಸಿರುವುದು ಕಂಡು ಬಂದಿದೆ.