ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯ ರವಾನೆ
ಮೈಸೂರು; ಝೀರೋ ಟ್ರಾಫಿಕ್ ವ್ಯವಸ್ಥೆ ಮೂಲಕ ಮೈಸೂರಿನಿಂದ ಬೆಂಗಳೂರಿಗೆ ಜೀವಂತ ಹೃದಯವೊಂದನ್ನು ರವಾನಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಚಾಮುಂಡಿ ಬೆಟ್ಟದಲ್ಲಿ ಅಪಘಾತವೊಂದು ಸಂಭವಿಸಿತ್ತು. ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಯುವಕ ಮತ್ತು ಯುವತಿ ಅಪಘಾತಕ್ಕೀಡಾಗಿದ್ದರು. ಘಟನೆಯಲ್ಲಿ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ. ಹಿಂದೆ ಕುಳಿತಿದ್ದ ಯುವತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಳು. ಯುವತಿ ಕೋಮಾಗೆ ಹೋಗಿದ್ದು, ಬದುಕುಳಿಯುವುದು ಕಷ್ಟ ಎಂದು ವೈದ್ಯರು ಕೈಚೆಲ್ಲಿದ್ದರು. ಈ ಹಿನ್ನಲೆಯಲ್ಲಿ ಕುಟುಂಬಸ್ಥರು ಯುವತಿಯ ಹೃದಯವನ್ನು ದಾನ ಮಾಡಲು ಒಪ್ಪಿದ್ದರು.
ಇದರಂತೆ ಯುವತಿಯ ಪೋಷಕರ ಒಪ್ಪಿಗೆ ಮೇರೆಗೆ ಶಸ್ತ್ರಚಿಕಿತ್ಸೆ ಮೂಲಕ ಜೀವಂತ ಹೃದಯವನ್ನು ಮೈಸೂರಿನ ಅರೋಲೋ ಆಸ್ಪತ್ರೆಯಿಂದ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಝೀರೋ ಟ್ರಾಫಿಕ್ ವ್ಯವಸ್ಥೆಯ ಮೂಲಕ ಪೊಲೀಸರ ಸಹಕಾರದೊಂದಿಗೆ ಆ್ಯಂಬ್ಯುಲೆನ್ಸ್ ನಲ್ಲಿ ಹೃದಯವನ್ನು ರವಾನೆ ಮಾಡಲಾಗಿದೆ.