ಪುರಭವನ ಎದುರು ಪ್ರತಿಭಟನೆ ನಡೆಸುತ್ತಿರುವ ಟೆಕ್ಕಿಗಳು
ಬೆಂಗಳೂರು; ನಿಗೂಢವಾಗಿ ನಾಪತ್ತೆಯಾಗಿರುವ ಟೆಕ್ಕಿ ಅಜಿತಾಭ್'ನನ್ನು ಪತ್ತೆ ಹಚ್ಚಲು ರಾಜ್ಯ ಪೊಲೀಸರು ವಿಫಲರಾಗಿದ್ದು, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಆಗ್ರಹಿಸಿ ಅಜಿತಾಭ್ ಕುಟುಂಬಸ್ಥರು ಹಾಗೂ ಸ್ನೇಹಿತರು ಭಾನುವಾರ ಪುರಭವನದ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಾಫ್ಟ್'ವೇರ್ ಎಂಜಿನಿಯರ್ ಗಳು ಮತ್ತು ಅತಿತಾಭ್ ಕುಟುಂಬ ಸದಸ್ಯರು ಪ್ರಕರಣ ಭೇಧಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಕೂಡಲೇ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಜಿತಾಭ್ ಸಹೋದರ ಅರುಣಾಭ್ ಅವರು, ಪ್ರಕರಣ ಭೇಧಿಸಲು ಪೊಲೀಸರಿಗೆ ಹಾಗೂ ಸಿಐಡಿ ಅಧಿಕಾರಿಗಳಿಗೆ ಏಕೆ ಆಗುತ್ತಿಲ್ಲ ಎಂಬುದು ಅರ್ಥವಾಗುತ್ತಿಲ್ಲ. ಪ್ರಕರಣವೊಂದು ಒಬ್ಬ ವ್ಯಕ್ತಿಯ ಬದುಕು-ಸಾವಿನ ಪ್ರಶ್ನೆಯಾಗಿದೆ. ನನ್ನ ಸಹೋದರ ನಾಪತ್ತೆಯಾಗಿ 7 ತಿಂಗಳುಗಳು ಕಳೆದಿವೆ. ಆದರೂ ಆತನ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಸಿಬಿಐ ಹಾಗೂ ಆಂತರಿಕ ಗುಪ್ತಚರ ದಳ ಸೇರಿದಂತೆ ಎಲ್ಲಾ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಂಡು ಸಹೋದರನನ್ನು ಹುಡುಕುವಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಬಳಿ ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆಂದು ಹೇಳಿದ್ದಾರೆ.
ಅಜಿತಾಭ್ ತಂದೆ ಎ.ಕೆ. ಸಿನ್ಹಾ ಅವರು ಮಾತನಾಡಿ, ಕೆಲ ದುಷ್ಕರ್ಮಿಗಳು ನನ್ನ ಪುತ್ರನ್ನು ಅಪಹರಣ ಮಾಡಿ ಆತನಲ್ಲಿರುವ ಕಲೆಗಳನ್ನು ಬಳಸಿಕೊಂಡು ದೇಶ ವಿರೋಧಿ ಚಟುವಟಿಕೆಗಳೇನಾದರೂ ಮಾಡುತ್ತಿದ್ದಾರೆಯೇ ಅಥವಾ ಮಾನವ ಕಳ್ಳಸಾಗಣೆಗೆ ಸಿಲುಕಿಕೊಂಡಿದ್ದಾನೆಂಯೇ ಎಂಬುದರ ಬಗ್ಗೆ ನನಗೆ ಭಯವಾಗುತ್ತಿದೆ ಎಂದು ಹೇಳಿದ್ದಾರೆ.
2017ರ ಡಿ.18 ರಂದು ಅಜಿತಾಭ್ ವಾಪತ್ತೆಯಾಗಿದ್ದು, ಪ್ರಕರಣದಲ್ಲಿ ಈ ವರೆಗೂ ಯಾವುದೇ ರೀತಿಯ ಪ್ರಗತಿಗಳು ಕಂಡು ಬಂದಿಲ್ಲ. ಪೊಲೀಸರು ನಿರ್ಲಕ್ಷ್ಯ ತೋರಿದ್ದು, ಗಂಭೀರವಾಗಿ ತನಿಕೆ ನಡೆಸುತ್ತಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಬೆಳ್ಳಂದೂರಿನ ಬ್ರಿಟಿಷ್ ಟೆಲಿಕಾಂನಲ್ಲಿ ಕಳೆದ 5 ವರ್ಷಗಳಿಂದ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಅಜಿತಾಭ್ ತನ್ನ ಸಿಯಾಜ್ ಕಾರನ್ನು ಮಾರಾಟ ಮಾಡುವ ಸಂಬಂಧ ಓಎಲ್ಎಕ್ಸ್ ನಲ್ಲಿ ಮಾಹಿತಿ ಹಾಕಿದ್ದರು. ಓಎಲ್ಎಕ್ಸ್ ನಲ್ಲಿ ಪ್ರಕಟಿಸಿದ ಬಳಿಕ ಅಜಿತಾಭ್ ಕರೆ ಬಂದಾಗಲೆಲ್ಲಾ ಕಾರು ಸಮೇತ ಹೊರ ಹೋಗಿ ಬರುತ್ತಿದ್ದರು. ಹೀಗೆ ಕಳೆದ ವರ್ಷ ಡಿಸೆಂಬರ್18 ರಂದು ಅವರ ಮೊಬೈಲ್'ಗೆ ಕರೆಯೊಂದು ಬಂದಿತ್ತು. ಹೊರಗೆ ಹೋದ ಅಜಿತಾಭ್ ಪುನಃ ವಾಪಸ್ ಆಗದೆ ನಿಗೂಢವಾಗಿ ನಾಪತ್ತೆಯಾಗಿದ್ದರು.