ಕೊಡಗಿನಲ್ಲಿ ಮಳೆ ತಂದ ಅವಾಂತರ
ಮಡಿಕೇರಿ: ಜಿಲ್ಲೆಯಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಮಳೆಯಿಂದಾಗಿ ಹಲವು ಮರಗಳು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು ಮನೆಗೆ ಹಾನಿಯಾಗಿದೆ.
ಮಂಗಳೂರು-ಮಡಿಕೇರಿ ಹೆದ್ದಾರಿಯಲ್ಲಿ ಬೃಹದಾಕಾರದ ಮರಬಿದ್ದ ಹಿನ್ನೆಲೆಯಲ್ಲಿ ಸುಮಾರು 7 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ರಕ್ಷಣಾ ತಂಡ ಬಾರದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಮತ್ತು ವಾಹನ ಸವಾರರೇ ರಸ್ತೆ ಮೇಲಿದ್ದ ಮರವನ್ನು ತೆರವು ಗೊಳಿಸಿದರು, ಇದರಿಂದಾಗಿ ಸುಮಾರು 2 ಕಿಮೀ ವರೆಗೂ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅದೃಷ್ಟ ವಶಾತ್ ಯಾರಿಗೂ ಹಾನಿಯಾಗಿಲ್ಲ.
ಮಂಗಳೂರು-ಮಡಿಕೇರಿರಸ್ತೆಯಲ್ಲಿ ಚಲಿಸುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಮೇಲೆ ವಿದ್ಯುತ್ ಕಂಬ ಉರುಳಿ ಬಿದ್ದಿದೆ.. ಆದರೆ ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಮರ ಉರುಳಿ ಬಿದ್ದ ಪರಿಣಾಮ ಕರಿಕೆ- ಭಾಗಮಂಡಲ ಹೆದ್ದಾರಿ ಕೂಡ ಕೆಲ ಕಾಲ ಬ್ಲಾಕ್ ಆಗಿತ್ತು. ವಿವಿದೆಡೆ ಭೂಕುಸಿತ ಕೂಡ ಸಂಭವಿಸಿ ಹಲವು ಮನೆಗಳಿಗೆ ಹಾನಿಯಾಗಿದೆ.
ಶ್ರೀಮಂಗಲ ರಸ್ತೆ ಕೂಡ ನೀರಿನಿಂದ ಜಲಾವೃತಗೊಂಡು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ, ಒಟ್ಟಾರೆ ಜಿಲ್ಲೆಯಲ್ಲಿ78.96 ಎಂಎಂ ಮಳೆಯಾಗಿದ್ದು, ಸೋಮವಾರ ಬೆಳಗ್ಗೆ 8 ಗಂಟೆಯಿಂದ ಮಂಗಳವಾರ ಬೆಳಗ್ಗೆ 8 ಗಂಟೆಯವರೆಗೆ ದಾಖಲೆಯ104.50 ಮಿಮಿ ಮಳೆಯಾಗಿದೆ, ಹೀಗಾಗಿ ಹಾರಂಗಿ ಜಲಾಶಯದ ನೀರಿನ ಮಟ್ಟ, 2,856.79 ಚದರ ಅಡಿಗೆ ತಲುಪಿದೆ. ಕೊಡಗಿನೆ ಎಲ್ಲಾ ಶಾಲಾ ಕಾಲೇಜುಗಳಿಗೆ ಜಿಲ್ಲಾಧಿಕಾರಿ ಶ್ರೀ ವಿದ್ಯಾ ರಜೆ ಘೋಷಿಸಿದ್ದಾರೆ.
ಉತ್ತರ ಕರ್ನಾಟಕದಲ್ಲೂ ಉತ್ತಮ ಮಳೆಯಾಗುತ್ತಿದ್ದು, ಕೃಷ್ಣಾ ನದಿ ನೀರಿನ ಹರಿವು ಹೆಚ್ಚಿದೆ. ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದೆ.