ರಾಜ್ಯ

ಕರ್ನಾಟಕವನ್ನು 'ಉಡ್ತಾ ಪಂಜಾಬ್' ಆಗಲು ಬಿಡುವುದಿಲ್ಲ: ಸಚಿವ ಪರಮೇಶ್ವರ್

Manjula VN
ಬೆಂಗಳೂರು: ರಾಜ್ಯದಲ್ಲಿ ಮಾದಕ ವಸ್ತು ಮಾರಾಟ ಮಾಡುವ ಜಾಲವನ್ನು ಸಂಪೂರ್ಣವಾಗಿ ಮುಕ್ತ ಮಾಡಲಾಗುತ್ತದೆ. ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಉಡ್ತಾ ಪಂಜಾಬ್ ಆಗಲು ಬಿಡುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಅವರು ಮಂಗಳವಾರ ಹೇಳಿದ್ದಾರೆ. 
ಅಧಿವೇಶನದ ಪ್ರಶ್ನೋತ್ತರ ವೇಳೆ ಕಾಂಗ್ರೆಸ್'ನ ಪ್ರತಾಪ್ ಚಂದ್ರ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಾದಕ ದ್ರವ್ಯ ಪಿಡುಗು ಇಡೀ ವಿಶ್ವದ ಸಮಸ್ಯೆಯಾಗಿದೆ. ಯುವ ಜನತೆ ಈ ಪಿಡುಗಿಗೆ ದೊಡ್ಡ ಪ್ರಮಾಮದಲ್ಲಿ ಬಲಿಯಾಗುತ್ತಿದ್ದಾರೆ. ಚಿಕ್ಕ ಮಕ್ಕಳಿಗೆ ಆರಂಭದಲ್ಲಿ ಮಾಮೂಲಿ ಚಾಕೋಲೆಟ್ ನೀಡಿ ನಂತರದ ದಿನಗಳಲ್ಲಿ ಮತ್ತು ಬರುವ ಚಾಕೋಲೆಟ್ ನೀಡಿ ಮಾದಕ ದ್ರವ್ಯ ವ್ಯಸನಿಗಳನ್ನಾಗಿ ಮಾಡಲಾಗುತ್ತಿದೆ ಎಂದು ಹೇಳಿದರು. 
ಹಾಸನ, ಚಿಕ್ಕಬಳ್ಳಾಪುರ, ಬೆಳಗಾವಿ ಮುಂತಾದ ಕೆಲವು ಜಿಲ್ಲೆಗಳ ತೋಟಗಳಲ್ಲಿ ಬೆಳೆಗಳ ಮಧ್ಯೆ ಗಾಂಜಾ ಬೆಳೆಯಲಾಗುತ್ತಿದೆ. ಪೊಲೀಸರು ಸಂಹ ಇಂತಹ ಮಾಹಿತಿ ಆಧರಿಸಿ ಕಾಲ ಕಾಲಕ್ಕೆ ದಾಳಿ ನಡೆಸಿ ಕ್ರಮ ಕೈಗೊಳ್ಳುತ್ತಿದ್ದಾರೆಂದು ತಿಳಿಸಿದರು. 
ಇತ್ತೀಚೆಗಷ್ಟೇ ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ರೂ.5 ಕೋಟಿ ಬೆಲೆ ಬಾಳುವ ಮಾದಕದ ಅಂಶ ಇರುವ ಮಾತ್ರೆಗಳನ್ನು ಅಬಕಾರಿ ಇಲಾಖೆ ವಶಪಡಿಸಿಕೊಂಡಿತ್ತು. ದೇವನಹಳ್ಳಿ ಸುತ್ತಮುತ್ತ ಇರುವ ಕೆಲವು ಔಷಧಿ ತಯಾರಿಕಾ ಕಂಪನಿಗಳು ಇಂತಹ ಮಾತ್ರೆ ತಯಾರಿಸಿ ವಿದೇಸಕ್ಕೆ ಮಾರಾಟ ಮಾಡುತ್ತಿರುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. 
ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕರಾವಳಿ ಜಿಲ್ಲೆಗಳಲ್ಲಿ ಎನ್'ಡಿಪಿಆಸ್ ಕಾಯ್ದೆ ಅಡಿ 20ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ವಿವರಿಸಿದರು. 
SCROLL FOR NEXT