ರಾಜ್ಯ

ಆತ್ಮಹತ್ಯೆಗೆ ಶರಣಾಗಿದ್ದ ಪೌರಕಾರ್ಮಿಕನ ಮನೆ-ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊತ್ತ ಪರಮೇಶ್ವರ್

Manjula VN
ಬೆಂಗಳೂರು; ವೇತನ ವಿಳಂಬದಿಂದ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದ ಪೌರ ಕಾರ್ಮಿಕ ಸುಬ್ರಮಣಿ ಪತ್ನಿ ಕವಿತಾ ಅವರಿಗೆ ಬಿಬಿಎಂಪಿ ಶಾಲೆಯಲ್ಲಿ ಆಯಾ ಕೆಲಸ ನೀಡಿ, ಅವರ ಮಕ್ಕಳ ವಿದ್ಯಾಭ್ಯಾಸದ ಹೊಣೆ ಜೊತೆಗೆ ಸಂತ್ರಸ್ತ ಕುಟುಂಬಕ್ಕೆ ಮನೆ ನಿರ್ಮಾಣ ಮಾಡಿಕೊಡುವುದಾಗಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಭಾನುವಾರ ಭರವಸೆ ನೀಡಿದ್ದಾರೆ. 
ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಪರಮೇಶ್ವರ್ ಅವರು ಗಾಂಧಿನಗರ ಮುನೇಶ್ವರ ಬ್ಲಾಕ್'ನಲ್ಲಿರುವ ಸುಬ್ರಮಣಿ ಅವರ ನಿವಾಸಕ್ಕೆ ಭೇಟಿ ನೀಡಿ ಆತ್ಮಹತ್ಯೆಗೆ ಪರಿಹಾರವಾಗಿ ಘೋಷಿಸಲಾಗಿದ್ದ ರೂ.10 ಲಕ್ಷಗಳಲ್ಲಿ ಬಾಕಿಯಿದ್ದ ರೂ.5 ಲಕ್ಷ ಪರಿಹಾರದ ಚೆಕ್'ನ್ನು ಕುಟುಂಬಕ್ಕೆ ವಿತರಿಸಿದರು. 
ಸುಬ್ರಮಣಿ ಅವರ ಪತ್ನಿ ಕವಿತಾ ಅವರಿಗೆ ಬಿಬಿಎಂಪಿ ಶಾಲೆಯಲ್ಲಿ ಆಯಾ ಕೆಲಸ ನೀಡಲಾಗುವುದು. ಜೊತೆಗೆ ಅವರ ಮಕ್ಕಳಾದ 10 ವರ್ಷದ ಪವಿತ್ರಾ ಮತ್ತು 7 ವರ್ಷದ ದರ್ಶನ್ ಅವರ ವಿದ್ಯಾಭ್ಯಾಸದ ಹೊಣೆಯನ್ನೂ ಬಿಬಿಎಂಪಿಯೇ ಹೊರಲಿದೆ ಎಂದು ಹೇಳಿದ್ದಾರೆ. ಜೊತೆಗೆ ಸುಬ್ರಮಣಿಯವರ ಕುಟುಂಬಕ್ಕೆ ವಾಸಿಸಲು ಮನೆ ನಿರ್ಮಾಣ ಮಾಡಿಕೊಡುವುದಾಗಿಯೂ ಭರವಸೆ ನೀಡಿದ್ದಾರೆ. 
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರ ಪರಮೇಶ್ವರ್ ಅವರು, ಸುಬ್ರಮಣಿ ಆತ್ಮಹತ್ಯೆಗೆ ಶರಣಾಗಿರುವುದು ವಿಷಾದದ ಸಂಗತಿ. ಗುತ್ತಿಗೆ ಪದ್ಧತಿಯಲ್ಲಿ ಕೆಲಸ ಮಾಡುತ್ತಿದ್ದ ಸುಬ್ರಮಣಿಯವರಿಗೆ ಗುತ್ತಿಗೆದಾರರು 6 ತಿಂಗಳಿನಿಂದ ವೇತನ ಬಾಕಿ ಇಟ್ಟಿದ್ದರು ಎಂಬುದು ಬೆಳಕಿಗೆ ಬಂದಿದೆ. ಗುತ್ತಿಗೆ ಪದ್ಧತಿ ಮುಗಿದ ಬಳಿಕ ಅವರನ್ನು ಗುತ್ತಿಗೆದಾರರು ನಿಯಮಬಾಹಿರವಾಗಿ ಪೌರ ಕಾರ್ಮಿಕ ಕೆಲಸಕ್ಕೆ ಸೇರಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅದಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. 
SCROLL FOR NEXT