ಬೆಂಗಳೂರು: ದುಬೈಯಿಂದ ಬಂದ ಪ್ರಯಾಣಿಕನೊಬ್ಬ ಸೊಂಟದ ಬೆಲ್ಟ್ ನಲ್ಲಿ ಅಡಗಿಸಿಟ್ಟಿದ್ದ ಸುಮಾರು 45 ಲಕ್ಷ ರೂಪಾಯಿ ಬೆಲೆಬಾಳುವ ಒಂದೂವರೆ ಕೆ ಜಿ ತೂಕದ ಚಿನ್ನವನ್ನು ಸುಂಕ ಇಲಾಖೆ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ನಡೆಯುವ 5ನೇ ಇಂತಹ ಪ್ರಕರಣವಾಗಿದೆ. ಮುಂಬೈ ಮೂಲದ ನಿವಾಸಿಯಾಗಿರುವ ಫಕ್ರುದ್ದೀನ್ ರುಕ್ಮುದ್ದೀನ್ ಮೊನ್ನೆ ಸೋಮವಾರ ರಾತ್ರಿ ಇಂಡಿಗೊ ವಿಮಾನ 6ಇ 096ನಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ. ಯಾರಿಗೂ ಗೊತ್ತಾಗಬಾರದೆಂದು ಸೊಂಟದ ಪಟ್ಟಿಯಲ್ಲಿ ಚಿನ್ನವನ್ನು ಅಡಗಿಸಿಕೊಟ್ಟು ಬಂದಿದ್ದ. ಕಸ್ಟಮ್ಸ್ ಅಧಿಕಾರಿಗಳು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ವಿಷಯ ಬೆಳಕಿಗೆ ಬಂದಿದೆ ಎನ್ನುತ್ತಾರೆ.
ಚಿನ್ನವನ್ನು ಪುಡಿ ಮಾಡಿ ಅದಕ್ಕೆ ಬೇರೆ ವಸ್ತುಗಳನ್ನು ಸೇರಿಸಿ ಪೇಸ್ಟ್ ರೀತಿ ಮಾಡಿಕೊಂಡು ತಂದಿದ್ದಾರೆ. ಬೆನ್ನಿನ ನೋವು ಇರುವವರು ಹಾಕಿಕೊಳ್ಳುವ ರೀತಿ ಸೊಂಟದ ಬೆಲ್ಟ್ ಇತ್ತು ಎಂದು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಯಾಣಿಕನನ್ನು ಬಂಧಿಸಲಾಗಿದ್ದು, ಮುಂದಿನ ವಿಚಾರಣೆ ನಡೆಯುತ್ತಿದೆ.