ರಾಜ್ಯ

ನಾನ್-ಪೀಕ್ ಅವಧಿಯಲ್ಲಿ ರೈಲು ಸಂಚಾರವನ್ನು ಹೆಚ್ಚಿಸಿದ ಮೆಟ್ರೊ ನಿಗಮ; ಆದಾಯ ಹೆಚ್ಚಳ

Sumana Upadhyaya

ಬೆಂಗಳೂರು; ನಾನ್-ಪೀಕ್ ಸಮಯದಲ್ಲಿ ಮೆಟ್ರೊ ರೈಲಿನಲ್ಲಿ ಪ್ರಯಾಣಿಸುವ ನೌಕರರಿಗೆ ಇಲ್ಲೊಂದು ಸಿಹಿ ಸುದ್ದಿಯಿದೆ. ಬೆಂಗಳೂರು ಮೆಟ್ರೊ ರೈಲು ನಿಗಮ ನಾನ್-ಪೀಕ್ ಅವರ್ ನಲ್ಲಿ ರೈಲು ಸಂಚರಿಸುವ ಸಂಖ್ಯೆಯನ್ನು ಹೆಚ್ಚಿಸಿದೆ. ಕಳೆದ ಸೋಮವಾರದಿಂದ ದಿನಕ್ಕೆ 300ಕ್ಕೂ ಹೆಚ್ಚು ಬಾರಿ ಪರ್ಪಲ್ ಮತ್ತು ಗ್ರೀನ್ ಮಾರ್ಗದ ರೈಲು ಸಂಚಾರ ನಡೆಸಿದೆ. ಬೆಳಗ್ಗೆ 11.30ರಿಂದ ಸಂಜೆ 4 ಗಂಟೆಯವರೆಗೆ ಪ್ರತಿ 10 ನಿಮಿಷಗಳಿಗೊಮ್ಮೆ ಇದುವರೆಗೆ ರೈಲು ಸಂಚರಿಸುತ್ತಿತ್ತು. ಅದೀಗ ಪ್ರತಿ 8 ನಿಮಿಷಗಳಿಗೊಮ್ಮೆ ಆಗಿದೆ.

ಮೊನ್ನೆ ಸೋಮವಾರ ಮತ್ತು ನಿನ್ನೆ ಮಂಗಳವಾರ ನಾನ್-ಪೀಕ್ ಅವರ್ ನಲ್ಲಿ ಒಟ್ಟು ಪ್ರತಿದಿನ 311 ಬಾರಿ ಮೆಟ್ರೊ ರೈಲು ಸಂಚರಿಸಿದೆ. ಬೈಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯ ಪರ್ಪಲ್ ಲೈನ್ ನಲ್ಲಿ ನಾನ್ ಪೀಕ್ ಅವರ್ ನಲ್ಲಿ 179 ಬಾರಿ ಮತ್ತು ಗ್ರೀನ್ ಲೈನ್ ನಲ್ಲಿ ನಾಗಸಂದ್ರದಿಂದ ಯಲಚೇನಹಳ್ಳಿಗೆ 132 ಟ್ರಿಪ್ ಗಳು ಆಗಿವೆ ಎಂದು ಬಿಎಂಆರ್ ಸಿಎಲ್ ಕಾರ್ಯನಿರ್ವಹಣೆ ಮತ್ತು ನಿರ್ವಹಣೆ ಕಾರ್ಯಕಾರಿ ನಿರ್ದೇಶಕ ಎ ಎಸ್ ಶಂಕರ್ ತಿಳಿಸಿದ್ದಾರೆ.

ಮೆಟ್ರೊ ರೈಲು ನಿಗಮದ ಈ ವ್ಯವಸ್ಥೆಯಿಂದ ಪ್ರಯಾಣಿಕರ ಸಂಖ್ಯೆ ಕೂಡ ಹೆಚ್ಚಳವಾಗಿದೆ. ಸೋಮವಾರ 4 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸಿ ನಿಗಮಕ್ಕೆ 1.15 ಕೋಟಿ ರೂಪಾಯಿ ಆದಾಯ ಬಂದಿದೆ. ನಾನ್-ಪೀಕ್ ಅವರ್ ನಲ್ಲಿಯೂ ಪ್ರಯಾಣಿಕರ ದಟ್ಟಣೆಯನ್ನು ಕಂಡು ಪ್ರಯಾಣದ ಸಂಖ್ಯೆಯನ್ನು ಹೆಚ್ಚಿಸಿ ಸಮಯದ ಅಂತರವನ್ನು 10 ನಿಮಿಷದಿಂದ 8 ನಿಮಿಷಕ್ಕೆ ಕಡಿಮೆ ಮಾಡಿದೆವು ಎನ್ನುತ್ತಾರೆ ಶಂಕರ್.

SCROLL FOR NEXT