ಬಳ್ಳಾರಿ: ಪೇದೆಯೊಬ್ಬರ ಪತ್ನಿಯೊಡನೆ ಅಕ್ರಮ ಸಂಬಂಧ ಹೊಂದಿದ್ದ ಪಿಎಸ್‌ಐವೊಬ್ಬರು ಪೋಲೀಸ್ ಕ್ವಾರ್ಟಸ್‌ಗೆ ಬೆಂಕಿ ಹಚ್ಚಿರುವ ಘಟನೆ ಬೆಳ್ಳಾರಿಯಲ್ಲಿ ನಡೆದಿದೆ.
ಬಳ್ಳಾರಿ ಪೋಲೀಸ್ ಇಲಾಖೆ ವೈರ್ ಲೆಸ್ ವಿಭಾಗದ ಪಿಎಸ್‌ಐ ಕಿರಣ್ ಸಾಮ್ರಾಟ್ ಪೇದೆಯೊಬ್ಬರ ಪತ್ನಿಯೊಂದಿಗೆ 5 ವರ್ಷಗಳಿಂದ ಅನೈತಿಕ ಸಂಬಂಧ ಹೊಂದಿದ್ದರು.ಪೇದೆ ಕೆಲಸಕ್ಕೆ ತೆರಳಿದಾಗ ಅವನ ಪತ್ನಿ ಕಿರಣ್ ಅವರ ಮನೆಗೆ ಆಗಮಿಸುತ್ತಿದ್ದರು.
ಆದರೆ ಇತ್ತೀಚೆಗೆ ಇವರ ನಡುವೆ ಸಣ್ಣ ಪ್ರಮಾಣದ ಮನಸ್ತಾಪ ಕಾಣಿಸಿತ್ತು.ಇದರಿಂದಾಗಿ ಪೇದೆಯ ಪತ್ನಿಯನ್ನು ತನ್ನ ಬಳಿಯೇ ಇರಿಸಿಕೊಂಡಿದ್ದ ಪಿಎಸ್ಐ ಎರಡು ದಿನಗಳಿಂದ ಆಕೆಯನ್ನು ಸಮಾಧಾನಪಡಿಸಲು ಯತ್ನಿಸಿದ್ದರು. ಹೀಗೆ ಸಮಾಧಾನ ಪಡಿಸುವ ವೇಳೆ ಪಿಎಸ್‌ಐ ಆಕೆಯೊಂದಿಗೆ ಮದ್ಯ ಸೇವಿಸಿದ್ದಾರೆ, ಸಿಗರೇಟ್ ಸೇದಿ ಮನೆ ತುಂಬಾ ಎಸೆದಿದ್ದಾರೆ.
ಆಗ ಮತ್ತೆ ಜಗಳ ತಾರಕಕ್ಕೇರಿದ್ದು ಅದು ವಿಕೋಪಕ್ಕೆ ತಿರುಗಿ ಕ್ವಾರ್ಟರ್ಸ್‌ಗೆ ಬೆಂಕಿ ಹಚ್ಚುವ ಮಟ್ಟ ತಲುಪಿದೆ. ಬೆಂಕಿಗೆ ಕ್ವಾರ್ಟರ್ಸ್ ನಲ್ಲಿದ್ದ ಪೀಠೋಪಕರಣಗಳು ಆಹುತಿಯಾಗಿದೆ. ಇದನ್ನು ಗಮನಿಸಿದ ಬೇರೆ ಪೋಲೀಸ್ ಸಿಬ್ಬಂದಿಗಳು ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪಿಸಿದ್ದಾರೆ. ಅವರು ಮೇಲಧಿಕಾರಿಗಳಿಗೆ ಕಿರಣ್ ವಿರುದ್ದ ದೂರನ್ನೂ ಕೊಟ್ಟಿದ್ದಾರೆ.
ಇನ್ನು ಕಿರಣ್ ಸಹ ವಿವಾಹಿತನಾಗಿದ್ದು ಘಟನೆ ನಡೆದ ವೇಳೆ ಆತನ ಪತ್ನಿ ಮನೆಯಲ್ಲಿರಲಿಲ್ಲ ಎನ್ನಲಾಗಿದೆ.
ಸಧ್ಯ ಪೇದೆಯ ಪತ್ನಿ ಹಾಗೂ ಕಿರಣ್ ಸಾಮ್ರಾಟ್ ಅವರುಗಳನ್ನು ಪೋಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಿರಣ್ ನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಸರ್ಕಾರಿ ಸ್ವತ್ತು ಹಾನಿ ಮಾಡಿದ ಪ್ರಕರಣದಲ್ಲಿ ಬಳ್ಳಾರಿ ಗಾಂಧಿ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.