ರಾಜ್ಯ

ಶಿರೂರು ಶ್ರೀ ಸಾವಿಗೆ ರಮ್ಯಾ ಶೆಟ್ಟಿಯೇ ಕಾರಣ: ಮಠದ ಮಾಜಿ ಮ್ಯಾನೇಜರ್

Lingaraj Badiger
ಹಾಸನ: ಕಳೆದ ಗುರುವಾರ ಅನುಮಾನಾಸ್ಪದವಾಗಿ ಮೃತಪಟ್ಟ ಉಡುಪಿ ಅಷ್ಟಮಠಗಳಲ್ಲಿ ಒಂದಾಗಿರುವ ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಸಾವಿಗೆ ರಮ್ಯಾ ಶೆಟ್ಟಿ ಎಂಬ ಮಹಿಳೆಯೇ ಕಾರಣ ಎಂದು ಮಠದ ಮಾಜಿ ಮ್ಯಾನೇಜರ್​ ಸುನೀಲ್​ ಕುಮಾರ್​ ಅವರು ಆರೋಪಿಸಿದ್ದಾರೆ.
ಶಿರೂರು ಮಠದಲ್ಲಿ ಸ್ವಾಮೀಜಿ ಮಾತಿಗಿಂತ ರಮ್ಯಾ ಮಾತು ಹೆಚ್ಚಾಗಿ ನಡೆಯುತ್ತಿತ್ತು. ಆಕೆಯೇ ಮಠದ ಬ್ಯಾಂಕ್​ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಳು. ಮಠಕ್ಕೆ ತರಕಾರಿ ಸೇರಿದಂತೆ ಪ್ರತಿಯೊಂದು ವಸ್ತುವನ್ನೂ ಆಕೆಯೇ ತರುತ್ತಿದ್ದಳು. ಇಡೀ ಮಠವನ್ನು ರಮ್ಯಾ ಸ್ವಾಧೀನಕ್ಕೆ ಪಡೆದಿದ್ದರು ಎಂದು ಸುನೀಲ್​ ದೂರಿದ್ದಾರೆ.
ರಮ್ಯಾ ಸ್ವಾಮೀಜಿ ಬಳಿ ಒಬ್ಬಂಟಿಯಾಗಿ ರಾತ್ರಿ ವೇಳೆ ಮಠದಲ್ಲಿ ಇರುತ್ತಿದ್ದಳು. ಸ್ವಾಮೀಜಿ ರೂಂಗೆ ಯಾರು ಹೋಗುತ್ತಿರಲಿಲ್ಲ. ಆದರೆ, ರಮ್ಯಾ ಮಾತ್ರ ಹೋಗುತ್ತಿದ್ದಳು. ಮಠಕ್ಕೆ ಸೇರಿದ ನಂತರ ರಮ್ಯಾ ಮೈತುಂಬ ಬಂಗಾರ, ಕಾರು, 2 ಮನೆ ಸೇರಿ ಆಸ್ತಿ ಹೆಚ್ಚಾಯಿತು. ಆಕೆಯೇ ಸ್ವಾಮೀಜಿಗೆ ಹೊರಗಿನಿಂದ ಆಹಾರ ತಂದು ಕೊಡುತ್ತಿದ್ದಳು. ಮಠದಲ್ಲಿ ಇರುವ ಸಿಸಿ ಟಿವಿ ಪರೀಕ್ಷಿಸಿದರೆ ಸತ್ಯಾಂಶ ತಿಳಿಯಲಿದೆ ಎಂದು ಸುನೀಲ್​ ಹೇಳಿದ್ದಾರೆ.
ಒಂಭತ್ತು ವರ್ಷ ನಾನು ಹಾಗೂ ನನ್ನ ಕುಟುಂಬ ಮಠದಲ್ಲಿದ್ದವು. ಸ್ವಾಮೀಜಿ ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಿದ್ದರು. ಆದರೆ ರಮ್ಯಾ ಶೆಟ್ಟಿ ಬಂದ ನಂತರ ಮಠದ ವಾತಾವರಣವೇ ಬದಲಾಯಿತು. ರಮ್ಯಾ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಪೊಲೀಸರಿಗೆಗೆ ದೂರು ನೀಡಿ‌ ಕಿರುಕುಳ ನೀಡಿ ಮಠದಿಂದ ಹೊರ ಹಾಕಿದಳು. ಸೂಕ್ತ ತನಿಖೆ ನಡೆಸಿ ರಮ್ಯಾ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಸುನೀಲ್​ ಒತ್ತಾಯಿಸಿದ್ದಾರೆ.
ರಮ್ಯಾ ಶೆಟ್ಟಿಯನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
SCROLL FOR NEXT