ಲಖನೌ: ತ್ರಿವಳಿ ತಲಾಖ್ ಸಂತ್ರಸ್ಥೆಯ ಮೇಲೆ ಕಲ್ಲು ತೂರಾಟ ಮಾಡಿ, ಆಕೆಯ ತಲೆ ಬೋಳಿಸಿದವರಿಗೆ ನಗದು ಬಹುಮಾನ ನೀಡುವುದಾಗಿ ಘೋಷಣೆ ಮಾಡಿ ಎನ್ ಜಿಒವೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದೆ.
ಮೋಯಿನ್ ಸಿದ್ದಿಕಿ ನೂರಿ ಎಂಬ ಉತ್ತರ ಪ್ರದೇಶ ಮೂಲದ ಎನ್ ಜಿಒ ಈ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು, ಈ ಹಿಂದೆ ತ್ರಿವಳಿ ತಲಾಖ್ ಪ್ರಕರಣದ ಮೂಲಕ ಸುದ್ದಿಗೆ ಗ್ರಾಸವಾಗಿದ್ದ ಉತ್ತರ ಪ್ರದೇಶದ ನಿಡಾಖಾನ್ ಮತ್ತು ಫರ್ಹಾತ್ ನಕ್ವಿ ಮೇಲೆ ಕಲ್ಲು ತೂರಾಟ ತಲೆ ಬೋಳಿಸುವಂತೆ ಆಮಿಷ ಒಡ್ಡಿದೆ. ಒಂದು ವೇಳೆ ಯಾರಾದರೂ ಈ ಕೆಲಸ ಮಾಡಿದರೆ ಅವರಿಗೆ 11786 ರೂ ನಗದು ಹಣ ನೀಡುವುದಾಗಿ ಘೋಷಣೆ ಮಾಡಿದೆ.
ಈ ಬಗ್ಗೆ ಸ್ವತಃ ತ್ರಿವಳಿ ತಲಾಖ್ ಸಂತ್ರಸ್ಥೆ ನಿಡಾಖಾನ್ ಅವರೇ ತಮ್ಮ ಅಳಲು ತೋಡಿಕೊಂಡಿದ್ದು, ಒಂದು ವೇಳೆ ನಾನು 3 ದಿನದಲ್ಲಿ ಈ ದೇಶ ಬಿಟ್ಟು ಹೋಗದಿದ್ದರೆ ನನ್ನ ಮೇಲೆ ಕಲ್ಲುಗಳಿಂದ ಹೊಡೆದು ಕೊಲ್ಲಲಾಗುತ್ತದೆ. ಅಂತೆಯೇ ನನ್ನ ತಲೆ ಬೋಳಿಸುವ ಕುರಿತು ಆದೇಶ ನೀಡಲಾಗಿದೆ. ಆದರೆ ನಾನು ಈ ಯಾವುದೇ ಬೆದರಿಕೆಗಳಿಗೆ ಬಗ್ಗುವುದಿಲ್ಲ. ನನ್ನ ಹೋರಾಟ ಮುಂದುವರೆಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಉತ್ತರ ಪ್ರದೇಶದಲ್ಲಿಯೇ ಇದ್ದಾರೆ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ನಾನು ಅವರನ್ನು ನೋಡುವ ಪ್ರಯತ್ನ ಮಾಡುವುದಿಲ್ಲ. ನನಗೆ ಜೀವ ಬೆದರಿಕೆ ಇದ್ದು, ಮುಂದಿನ ದಿನಗಳಲ್ಲಿ ದೆಹಲಿ ತೆರಳಿ ಅವರನ್ನು ಕಾಣುತ್ತೇನೆ ಎಂದು ನಿಡಾಖಾನ್ ಹೇಳಿದ್ದಾರೆ.
ಇನ್ನು ಈ ಹಿಂದೆ ಇದೇ ತ್ರಿವಳಿ ತಲಾಖ್ ಸಂತ್ರಸ್ಥೆಯರಾದ ನಿಡಾಖಾನ್ ಮತ್ತು ಫರ್ಹಾತ್ ನಕ್ವಿ ವಿರುದ್ಧ ಫತ್ವಾ ಹೊರಡಿಸಲಾಗಿತ್ತು. ಈ ಇಬ್ಬರೂ ಮಹಿಳೆಯರಿಗೆ ಯಾವುದೇ ಕಾರಣಕ್ಕೂ ವೈದ್ಯಕೀಯ ನೆರವು ನೀಡದಂತೆ ಮತ್ತು ಸತ್ತರೆ ಸ್ಮಶಾಣದಲ್ಲಿ ಹೂಳಲು ಜಾಗ ನೀಡದಂತೆ ಫತ್ವಾ ಹೊರಡಿಸಲಾಗಿತ್ತು. ಈ ವಿಚಾರ ದೇಶಾದ್ಯಂತ ವ್ಯಾಪಕ ಚರ್ಚೆಗೀಡಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics