ಉಡುಪಿ: ಶಿರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮಿಗಳ ಶಂಕಾಸ್ಪದ ಸಾವಿನ ಬಗ್ಗೆ ಉಡುಪಿ ಪೊಲೀಸರು ಮೌನ ಕಾಪಾಡಿದ್ದು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.
ಜಠರದಲ್ಲಿ ರಕ್ತಸ್ರಾವದಿಂದ ಶಿರೂರು ಶ್ರೀಗಳು ಕಳೆದ ಗುರುವಾರ ಹಠಾತ್ ನಿಧನರಾಗಿದ್ದರು. ಪೊಲೀಸರು ಈ ಸಂಬಂಧ ಇದುವರೆಗೆ ನಾಲ್ವರನ್ನು ತನಿಖೆ ನಡೆಸಿದ್ದಾರೆ. ಆದರೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಮೂಲಗಳು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿವೆ.
ಈ ಮಧ್ಯೆ, ಶ್ರೀಗಳು ಮಹಿಳೆಯೊಬ್ಬರ ಜೊತೆ ಹೆಚ್ಚು ಆಪ್ತವಾಗಿದ್ದು ಆಕೆ ವಿಷ ಮಿಶ್ರಿತ ಜ್ಯೂಸ್ ನೀಡಿ ಶ್ರೀಗಳನ್ನು ಕೊಂದರು ಎಂಬ ಸುದ್ದಿಗಳು ನಿನ್ನೆ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿತ್ತು. ಆದರೆ ಉಡುಪಿ ಪೊಲೀಸ್ ಸೂಪರಿಂಟೆಂಡೆಂಟ್ ಲಕ್ಷ್ಮಣ್ ನಿಂಬರ್ಗಿ ಇದು ವದಂತಿಯಷ್ಟೆ, ಇಂತಹ ಪರಿಶೀಲಿಸದೆ ಇರುವ ಮಾಹಿತಿಯನ್ನು ಹಬ್ಬಿಸಬೇಡಿ, ಅದರಿಂದ ತನಿಖೆಗೆ ತೊಂದರೆಯುಂಟಾಗುತ್ತದೆ ಎಂದು ಹೇಳಿದ್ದಾರೆ.
ಶ್ರೀಗಳ ಸಂಶಯಾಸ್ಪದ ಸಾವಿನಲ್ಲಿ ಮಹಿಳೆಯಿಂದ ವಿಷಪ್ರಾಶನವಾಗಿರುವ ಬಗ್ಗೆ ಇದುವರೆಗೆ ನಮಗೆ ಖಚಿತ ಮಾಹಿತಿ ಸಿಕ್ಕಿಲ್ಲ. ತನಿಖೆಯಲ್ಲಿ ಯಾವುದೇ ಹೊಸ ಬೆಳವಣಿಗೆಗಳಾದರೆ ನಾವು ಮಾಧ್ಯಮಗಳಿಗೆ ಅಧಿಕೃತವಾಗಿ ತಿಳಿಸುತ್ತೇವೆ, ಹಾಗಾಗಿ ಅನಧಿಕೃತ ವದಂತಿಗಳನ್ನು ಮಾಧ್ಯಮಗಳು ಪ್ರಸಾರ ಮಾಡಬಾರದೆಂದು ಕೇಳಿಕೊಳ್ಳುತ್ತೇನೆ ಎಂದು ಅವರು ವಿನಂತಿ ಮಾಡಿದ್ದಾರೆ.
ಶ್ರೀಗಳ ಸಾವಿನ ಹಿನ್ನಲೆಯಲ್ಲಿ ಇದುವರೆಗೆ ಪೊಲೀಸರು ಯಾರನ್ನೂ ತನಿಖೆ ನಡೆಸಿಲ್ಲ. ಆದರೆ ಬೇರೆ ಮೂಲಗಳಿಂದ ತನಿಖೆ ಮುಂದುವರಿದಿದೆ ಎಂದು ಮೂಲಗಳು ತಿಳಿಸಿವೆ.