ಬೆಂಗಳೂರು: ಖ್ಯಾತ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಗಳಾಗಿದ್ದ ಪರಶುರಾಮ್ ವಾಗ್ಮೋರೆ ಹಾಗು ಬೈಕ್ ಸವಾರ ಗಣೇಶ್ ಮಿಸ್ಕಿನ್ ಹತ್ಯೆ ನಡೆಸಿದ್ದ ಬಳಿಕ ಇನ್ನೊಂದು ವಾಹನದಲ್ಲಿ ಪರಾರಿಯಾಗಿದ್ದರೆನ್ನುವ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ.
ಅಪರಾಧ ಕೃತ್ಯಕ್ಕೆ ಒಂದಕ್ಕಿಂತ ಹೆಚ್ಚು ವಾಹನ ಬಳಸಲಾಗಿದೆ ಎನ್ನುವುದು ತನಿಖೆಯಿಂದ ಸಾಬೀತಾಗಿದೆ, ಬೈಕರ್ ಗಣೇಶ್ ಹಾಗೂ ಹತ್ಯೆ ನಡೆಸಿದ್ದ ಪರಶುರಾಮ್ ತಾವು ಬೈಕ್ ನಲ್ಲಿ ರಾಜರಾಜೇಶ್ವರಿ ನಗರದ ಗೌರಿ ಅವರ ಮನೆಗೆ ಆಗಮಿಸಿದ್ದರು.ಅಲ್ಲಿ ಗೌರಿ ಅವರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿದ್ದ ಅವರುಗಳು ಸ್ವಲ್ಪ ದೂರ ಬೈಕ್ ನಲ್ಲಿ ತೆರಳಿದ ಬಳಿಕ ಕಾರ್ ಒಂದರಲ್ಲಿ ತಮಗಾಗಿ ಕಾಯುತ್ತಿದ್ದ ತಂಡದ ಇತರೆ ಸದಸ್ಯರನ್ನು ಸೇರಿಕೊಂಡಿದ್ದಾರೆ. ಅವರು ಕಾರಿನಲ್ಲಿದ್ದ ಒಬ್ಬ ವ್ಯಕ್ತಿಗೆ ಬೈಕ್ ಕೊಟ್ಟು ತಾವು ಪಿಸ್ತೂಲು ಮತ್ತಿತರೆ ಶಸ್ತ್ರಾಸ್ತ್ರಗಳೊಡನೆ ಕಾರನ್ನೇರಿ ಪರಾರಿಯಾಗಿದ್ದರೆಂದು ಎಸ್ ಐಟಿ ಮೂಲಗಳು ಹೇಳಿದೆ.
ಈ ಕಾರಣಕ್ಕಾಗಿಯೇ ಅವರು ಘಟನೆ ನಡೆದ ಕೆಲವೇ ಕ್ಷಣಗಳಲ್ಲಿ ಪೋಲೀಸರು ಜಾಗೃತಗೊಳ್ಳುವ ಮುನ್ನವೇ ತಪ್ಪಿಸಿಕೊಳ್ಳುವುದು ಸಾಧ್ಯವಾಗಿದೆ.
ಎಸ್ ಐಟಿ ಇದಾಗಲೇ ಒಂಭತ್ತು ಶಂಕಿತರನ್ನು ಬಂಧಿಸಿದ್ದು ಘಟನೆಯ ಪ್ರಮುಖ ಆರೋಪಿ ಎನಿಸಿರುವ ನಿಷಾಲ್ ಅಲಿಯಾಸ್ ದಾದಾ ಸೇರಿ ಇನ್ನೂ ಕೆಲವರನ್ನು ಪತ್ತೆ ಹಚ್ಚಿ ಶೀಘ್ರವೇ ಬಂಧಿಸಲಾಗುತ್ತದೆ ಎಂದು ಎಸ್ ಐಟಿ ಅಧಿಕಾರಿಗಳು ಹೇಳಿದ್ದಾರೆ.
ಮತ್ತಿಬ್ಬರು ವಶಕ್ಕೆ
ಗೌರಿ ಹತ್ಯೆ ಪ್ರಕರಣದಲ್ಲಿ ಎಸ್‌ಐಟಿ ತಂಡ ತನಿಖೆ ಚುರುಕುಗೊಳಿಸಿದ್ದು ಮತ್ತಿಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಬಂಧನಕ್ಕೊಳಗಾದವರನ್ನು ಗಣೇಶ್ ವಿಸ್ಕಿನ್ ಮತ್ತು ಅಮಿತ್ ರಾಮಚಂದ್ರ ಬದ್ದಿ ಎಂದು ಗುರುತಿಸಲಾಗಿದ್ದು, ಆರೋಪಿಗಳು ಹುಬ್ಬಳ್ಳಿಯ ಬನಶಂಕರಿ ದೇವಾಲಯ ಬೀದಿಯಲ್ಲಿ ನೆಲೆಸಿದ್ದರು. ಈ ಇಬ್ಬರೂ ಹುಬ್ಬಳ್ಳಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮ ಹಾಗು ಮೆರವಣಿಗೆ ವೇಳೆ ಅಡ್ಡಿ ಮತ್ತು ಹಿಂಸೆಗೆ ಕಾರಣರಾಗಿದ್ದರೆಂದು ಪ್ರಕರಣ ದಾಖಲಾಗಿತ್ತು ಎಂದು ತನಿಖಾದಳ ಮೂಲಗಳು ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics