ಬೆಂಗಳೂರು: ಕೇಂದ್ರ ಸರ್ಕಾರ ಮಂಡಿಸಲು ಉದ್ದೇಶಿಸಿರುವ ಭಾರತೀಯ ವೈದ್ಯಕೀಯ ಪರಿಷತ್'ನ ತಿದ್ದುಪಡಿ ವಿಧೇಯಕ ವಿರೋಧಿಸಿ ಖಾಸಗಿ ವೈದ್ಯರು ದೇಶದಾದ್ಯಂತ ಇಂದು ಹೊರ ರೋಗಿ ಸೇವೆ ಬಹಿಷ್ಕರಿಸಿ ನಡೆಸಿದ ಮುಷ್ಕರಕ್ಕೆ ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೂ ನಡೆದ ಬಂದ್ ವೇಳೆಯಲ್ಲಿ ಕೆಲ ದೊಡ್ಡ ಆಸ್ಪತ್ರೆಯ ಹೊರ ರೋಗಿ ಸೇವೆ ಮುಚ್ಚಲಾಗಿತ್ತು. ಕೆಲವು ಕಡೆ ಚಿಕ್ಕ ಆಸ್ಪತ್ರೆಗಳು ಹಾಗೂ ನರ್ಸಿಂಗ್ ಹೋಮ್ ಗಳ ಹೊರರೋಗಿ ವಿಭಾಗ ತೆರೆದಿತ್ತು. ಇದರಿಂದಾಗಿ ರೋಗಿಗಳು ಚಿಕಿತ್ಸೆ ದೊರೆಯದೆ ಪರದಾಡುವಂತಾಯಿತು.
ಚಾಮರಾಜಪೇಟೆಯ ಭಾರತೀಯ ವೈದ್ಯಕೀಯ ಮಂಡಳಿ ಕಟ್ಟಡದಿಂದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯವರೆಗೂ ಭಾರತೀಯ ವೈದ್ಯಕೀಯ ಮಂಡಳಿ ಸದಸ್ಯರು ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಖಾಸಗಿ ಆಸ್ಪತ್ರೆ ವೈದ್ಯರ ಪ್ರತಿಭಟನೆಯಿಂದಾಗಿ ಸೂಕ್ತ ಚಿಕಿತ್ಸೆ ದೊರೆಯದೆ ನಿನ್ನೆಯಷ್ಟೇ ಜನಿಸಿದ ಮಗುವೊಂದು ಮೃತಪಟ್ಟಿರುವ ಬಗ್ಗೆ ಬೆಳಗಾವಿಯಲ್ಲಿ ವರದಿಯಾಗಿದ್ದು, ಈ ವಿಚಾರ ಸಂಬಂಧ ತನಿಖೆ ನಡೆಸುವುದಾಗಿ ಭಾರತೀಯ ವೈದ್ಯಕೀಯ ಮಂಡಳಿಯ ರಾಜ್ಯಾಧ್ಯಕ್ಷ ಡಾ. ಹೆಚ್. ಎನ್. ರವೀಂದ್ರ ಹೇಳಿದ್ದಾರೆ.
ಬೆಂಗಳೂರಿನ ಶೇಷಾದ್ರಿಪುರಂ ಬಳಿ ಇರುವ ಅಪೊಲೊ ಆಸ್ಪತ್ರೆ ತೆರೆದಿತ್ತು. ಆದರೆ. ಹೊರ ರೋಗಿ ಸೇವೆಯ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದರು. ಆದರೆ, ತುರ್ತು ನಿಗಾ ಘಟಕದಲ್ಲಿದ್ದ ಒಬ್ಬ ವೈದ್ಯರು ಹಾಗೂ ಇಬ್ಬರು ನರ್ಸ್ ಗಳು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು.
ಹೊರರೋಗಿ ವಿಭಾಗದ ವೈದ್ಯರು ಮುಷ್ಕರದಲ್ಲಿ ನಿರತರಾಗಿದ್ದರೂ ಬನ್ನೇರುಘಟ್ಟ ರಸ್ತೆಯ ಅಪೊಲೋ ಆಸ್ಪತ್ರೆಯಲ್ಲಿ ಸೇವೆ ಮುಂದುವರೆದಿತ್ತು. ತುರ್ತು ರೋಗಿಯ ಚಿಕಿತ್ಸೆಗಾಗಿ ಡಾಕ್ಟರ್ ವ್ಯವಸ್ಥೆ ಮಾಡಲಾಗಿತ್ತು. ಉಳಿದವರು ಹೋಗಿ ಕೇಳಿದ್ದರೆ ಸಂಜೆ 6 ಗಂಟೆ ಅಥವಾ ಸೋಮವಾರ ನಂತರ ಬನ್ನಿ ಎಂದು ಹೇಳಲಾಗುತಿತ್ತು ಎಂದು 73 ವರ್ಷದ ವೃದ್ಧ ಸುಬ್ರಹ್ಮಣ್ಯ ಹೇಳಿದರು.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos