ರಾಜ್ಯ

ಜನರಿಗೆ ಅಗತ್ಯವೆನಿಸಿದರೆ ಮಾತ್ರ ನಗರದಲ್ಲಿ 'ಎಲಿವೇಟೆಡ್ ಕಾರಿಡಾರ್': ಸಿಎಂ ಕುಮಾರಸ್ವಾಮಿ

Manjula VN
ಬೆಂಗಳೂರು: ನಗರದ ಜನತೆಗೆ ಅಗತ್ಯವಿದ್ದರೆ ಮಾತ್ರ ಎಲಿವೇಟೆಡ್ ಕಾರಿಡಾರ್ ಯೋಜನೆಯನ್ನು ನಡೆಸಲಾಗುತ್ತದೆ ಎಂದು ಹೆಚ್.ಡಿ.ಕುಮಾರಸ್ವಾಮಿಯವರು ಹೇಳಿದ್ದಾರೆ. 
ಎಲಿವೇಟೆಡ್ ಕಾರಿಡಾರ್ ಕುರಿತಂತೆ ವಿರೋಧಗಳು ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಇಂದು ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಬಳಿಕ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿಯವರು, ಯೋಜನೆಗೆ ರೂ.15,825 ಕೋಟಿ ವೆಚ್ಚವಾಗಲಿದೆ. ನಗರದ ಜನತೆಗೆ ಅಗತ್ಯವಿದ್ದರೆ ಮಾತ್ರ ಯೋಜನೆಯನ್ನು ಮುನ್ನಡೆಸಲಾಗುತ್ತದೆ ಎಂದು ಹೇಳಿದ್ದಾರೆ. 
ಯೋಜನೆ ಕುರಿತಂತೆ ಪ್ರಾಥಮಿಕ ಸಭೆಗಳನ್ನಷ್ಟೇ ನಡೆಸಲಾಗಿದೆ. ಆದರೆ, ಈ ಬಗ್ಗೆ ಯಾವುದೇ ರೀತಿಯ ನಿರ್ಧಾರಗಳನ್ನೂ ಕೈಗೊಂಡಿಲ್ಲ. ಜನರಿಗೆ ಅಗತ್ಯವಿದ್ದರೆ ಮಾತ್ರ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಇಲ್ಲದೇ ಹೋದರೆ, ಯೋಜನೆಯನ್ನು ಕೈಬಿಡಲಾಗುತ್ತದೆ. ಸಂಚಾರ ದಟ್ಟಣೆ ಆನಂದಿಸುವುದು ಜನರಿಗೆ ಇಷ್ಟವಿರುವುದೇ ಆದರೆ, ಆನಂದಿಸಲಿ ಎಂದು ತಿಳಿಸಿದ್ದಾರೆ. 
ಕಳೆದ 12 ವರ್ಷಗಳಿಂದ ಯೋಜನೆಯು ಸಭೆಗಳ ಹಂತದಲ್ಲಿಯೇ ಇದೆ, ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಸಲುವಾಗಿ 2006ರಲ್ಲಿ ಯೋಜನೆಯ ಪ್ರಸ್ತಾಪವಿಡಲಾಗಿತ್ತು ಎಂದಿದ್ದಾರೆ. 
ಯೋಜನೆಗೆ ಪ್ರತೀ ಪರ್ಯಾಯ ಮಾರ್ಗಗಳನ್ನೂ ಸರ್ಕಾರ ಪರಿಗಣಿಸುತ್ತಿದೆ. ಮೆಟ್ರೋ, ಬಿಎಂಟಿಸಿ ಹಾಗೂ ಎಲಿವೇಟೆಡ್ ರಸ್ತೆಗಳು ಸಂಚಾರ ದಟ್ಟಣೆಯನ್ನು ನಿಯಂತ್ರಿಸುತ್ತದೆ. ಯೋಜನೆ ಬಗ್ಗೆ ಹಲವು ತಜ್ಞರ ಬಳಿ ಸಲಹೆಗಳನ್ನು ಪಡೆದುಕೊಳ್ಳಲಾಗುತ್ತಿದೆ. ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. 
SCROLL FOR NEXT