ಶಶಾಂಕ್ ತಿವಾರಿ, ಅನಘಾ ಎಂ.ವಿ ಮತ್ತು ಕಾರ್ತಿಕ್ ರೈ
ಬೆಂಗಳೂರು: ದೇಶದಲ್ಲಿರುವ ಕಾನೂನು ವಿಶ್ವವಿದ್ಯಾಲಯಗಳ ಪ್ರವೇಶಕ್ಕಾಗಿ ಮೇ.13ರಂದು ನಡೆಸಲಾಗಿದ್ದ 2018ನೇ ಸಾಲಿನ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್ಎಟಿ) ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, ಟಾಪ್ 100 ಪಟ್ಟಿಯಲ್ಲಿ ಬೆಂಗಳೂರಿನ ಮೂವರು ಸ್ಥಾನ ಪಡೆದುಕೊಂಡಿದ್ದಾರೆ.
ಟಾಪ್ 100 ಪಟ್ಟಿಯಲ್ಲಿ ಮೊದಲ ಮೂರು ರ್ಯಾಂಕ್ ಜೈಪುರದ ಪಾಲಾಗಿದ್ದು, ಅಮನ್ ಗಾರ್ಗ್ ಪ್ರಥಮ, ದಿವಿಶ್ ಕೌಶಿಕ್ ದ್ವಿತೀಯ ಮತ್ತು ಅನಮೋಲ್ ಗುಪ್ತಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಪಟ್ಟಿಯಲ್ಲಿ ಮೂವರು ಬೆಂಗಳೂರಿಗರೂ ಕೂಡ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಭಗವಾನ್ ಮಹವೀರ್ ಜೈನ್ ಕಾಲೇಜಿನ ವಿದ್ಯಾರ್ಥಿ ಎಂ.ವಿ ಅನಘಾ ಅಖಿಲ ಭಾರತೀಯ ಮಟ್ಟದಲ್ಲಿ 22ನೇ ರ್ಯಾಂಕ್ ಗಳಿಸುವ ಮೂಲಕ ರಾಜ್ಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇನ್ನು ದೆಹಲಿ ಪಬ್ಲಿಕ್ ಶಾಲೆಯ (ಉತ್ತರ) ಶಶಾಂಕ್ ತಿವಾರಿ 31ನೇ ರ್ಯಾಕ್ ಮತ್ತು ವಿದ್ಯಾಮಂದಿರ ಪಿಯು ಕಾಲೇಜಿನ ಕಾರ್ತಿಕ್ ರೈ 53ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
2ನೇ ಬಾರಿಗೆ ಈ ಪರೀಕ್ಷೆ ಬರೆದಿದ್ದೆ. ಎನ್ಎಲ್ಎಸ್ಐಯುನಲ್ಲೇ ಸೀಟು ಪಡೆಯಬೇಕೆಂಬ ಉದ್ದೇಶದಿಂದ ತರಬೇತಿ ಪಡೆದು ನಿರಂತರವಾಗಿ ಅಭ್ಯಾಸ ಮಾಡಿ ಪರೀಕ್ಷೆ ಬರೆದಿದ್ದಕ್ಕೆ ಸಾರ್ಥಕವಾಯಿತು ಎಂದು ಅನಘಾ ಅವರು ಹೇಳಿದ್ದಾರೆ.
ನನ್ನ ತಂದೆ ಎಲ್ಎಲ್'ಬಿ ಪದವಿ ಪಡೆದುಕೊಂಡಿದ್ದಾರೆ. ಆದರೆ, ಆರ್ಥಿಕ ಸಮಸ್ಯೆ ಎದುರಾಗಿದ್ದರಿಂದಾಗಿ ಅವರು ಬ್ಯಾಂಕಿಂಗ್ ಉದ್ಯೋಗಕ್ಕೆ ಹೋಗಬೇಕಾಗಿ ಬಂತು. ಅವರ ಕನಸನ್ನು ನಾನು ನನಸು ಮಾಡಬೇಕೆಂದು ಬಯಸಿದ್ದೇನೆ. ಹೀಗಾಗಿಯೇ ಕ್ಲಾಟ್ ಪರೀಕ್ಷೆಯನ್ನು ಬರೆದಿದ್ದೆ. ಎನ್ಎಲ್ಎಸ್ಐಯುನಲ್ಲಿ ಸೀಟು ಪಡೆಯಬೇಕೆಂಬ ಉದ್ದೇಶ ಹೊಂದಿದ್ದೇನೆಂದು ಕಾರ್ತಿಕ್ ರೈ ತಿಳಿಸಿದ್ದಾರೆ.
ದೂರದ ಸಂಬಂಧಿಯಾಗಿರುವ ನನ್ನ ಚಿಕ್ಕಪ್ಪ ನನ್ನನ್ನು ಪ್ರೇರೇಪಿಸಿದ್ದರು. ಹೀಗಾಗಿಯೇ ನಾನು ಕ್ಲಾಟ್ ಪರೀಕ್ಷೆ ಬರೆದಿದ್ದೆ. ಎನ್ಎಲ್ಎಸ್ಐಯುವಿನಲ್ಲಿ ಸೀಟು ಪಡೆಯುವ ವಿಶ್ವಾಸವಿದೆ ಎಂದು ಶಶಾಂಕ್ ಅವರು ಹೇಳಿದ್ದಾರೆ.
ಕೊಚ್ಚಿಯಲ್ಲಿರುವ ನ್ಯಾಷನಲ್ ಯೂನಿವರ್ಸಿಟಿ ಆಫ್ ಅಡ್ವಾನ್ಸ್ ಲೀಗಲ್ ಸ್ಟಡೀಸ್ ದೇಶದ 63 ಪರೀಕ್ಷಾ ಕೇಂದ್ರಗಳಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ 59 ಸಾವಿರ ವಿದ್ಯಾರ್ಥಿಗಳು ಹಾಜರಾಗಿದ್ದರು. ರ್ಯಾಂಕ್ ಗಳ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುತ್ತದೆ. ಜೂ.7ರ ಬಳಿಕ ಕಟ್ ಆಫ್ ಅಂಕಗಳನ್ನು ಪ್ರಕಟಗೊಳ್ಳಲಿದೆ. ದೇಶದ 19 ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಗಳಿಂದ 2,340 ಸೀಟುಗಳು ಲಭ್ಯವಿದೆ.
ಕನ್ನಡಿಗರಿಗೆ ಮೀಸಲಾತಿ; ಸಿಗದ ರಾಜ್ಯಪಾಲರ ಅನುಮತಿ
ನಾಗರಬಾವಿಯಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ (ಎನ್ಎಲ್ಎಸ್ಐಯು)ದಲ್ಲಿ ಲಭ್ಯವಿರುವ ಸೀಟುಗಳ ಪೈಕಿ ಶೇ.50 ಕನ್ನಡಿಗರಿಗೆ ಮೀಸಲಿಡಬೇಕೆಂಬ ನಿಯಮಕ್ಕೆ ರಾಜ್ಯಪಾಲರು ಒಪ್ಪಿಗೆ ನೀಡಿಲ್ಲ. ಹೀಗಾಗಿ ಕನ್ನಿಡಿಗರು ಮೀಸಲಾತಿಯಿಂದ ವಂಚಿತರಾಗಿದ್ದಾರೆ.
ಲಭ್ಯವಿರುವ ಸೀಟುಗಳ ಪೈಕಿ ಶೇ.50 ಸೀಟುಗಳನ್ನು ಕನ್ನಡಿಗರಿಗೆ ನೀಡಬೇಕು ಎಂದು ವಿಧೇಯಕ ತಿದ್ದುಪಡಿ ಮಾಡಿ ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಿತ್ತು. ಆದರೆ, ಈ ನಿಮಯಕ್ಕೆ ರಾಜ್ಯಪಾಲರು ಈವರೆಗೆ ಒಪ್ಪಿಗೆ ನೀಡಿಲ್ಲ. ಹೀಗಾಗಿ, 2018-19ನೇ ಸಾಲಿನ ಕನ್ನಡಿಗ ವಿದ್ಯಾರ್ಥಿಗಳಿಗೆ ಮೀಸಲಾತಿ ಸೌಲಭ್ಯದಿಂದ ವಂಚಿತರಾಗಲಿದ್ದಾರೆ. ರಾಜ್ಯಪಾಲರು ಅಂಕಿತ ಹಾಕಿದ ಬಳಿಕವಷ್ಟೇ ಕನ್ನಡಿಗರಿಗೆ ಮೀಸಲಾತಿ ಸೌಲಭ್ಯ ದೊರೆಯಲಿದೆ. ಕಾನೂನು ಶಾಲೆಗಳ ಮೀಸಲಾತಿಗಾಗಿ ಕನ್ನಡಿಗರು ಮತ್ತೊಂದು ವರ್ಷ ಕಾಯಬೇಕಿದೆ.