ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ
ಬೆಂಗಳೂರು; ಬಿತ್ತನೆ ಬೀಜ ಹಾಗೂ ಗೊಬ್ಬರ ಕುರಿತು ರೈತರು ಸಮಸ್ಯೆಗಳನ್ನು ಎದುರಿಸುವುದಿಲ್ಲ. ಈಗಾಗಲೇ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಶನಿವಾರ ಹೇಳಿದ್ದಾರೆ.
ಕೃಷಿ, ರೇಷ್ಮೆ ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಪ್ರಸಕ್ತ ವರ್ಷ ರಾಜ್ಯದಲ್ಲಿ ಶೇ.51 ರಷ್ಟು ಹೆಚ್ಚು ಮಳೆಯಾಗಿದೆ. ಮೂರು ದಿನಕ್ಕೂ ಮೊದಲೇ ಮಾನ್ಸೂನ್ ಆಗಮಿಸಿದೆ. ರೈತರು ತಮ್ಮ ಕಾರ್ಯಗಳಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುವುದಿಲ್ಲ. ರೈತರ ನಿರೀಕ್ಷೆಗಳಿಗೆ ಅನುಸಾರವಾಗಿ ಅಧಿಕಾರಿಗಳು ಕಾರ್ಯನಿರ್ವಹಿಸಿದ್ದಾರೆಂದು ಹೇಳಿದ್ದಾರೆ.
ಅಲ್ಲದೆ, ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳನ್ನು ವಿತರಿಸುತ್ತಿರುವ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಇದೇ ವೇಳೆ ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ.
ಉನ್ನತಮಟ್ಟದ ತಂತ್ರಜ್ಞಾನ ಮತ್ತು ಇಸ್ರೇಲ್ ನ ರೈತರು ಅನುಸರಿಸುತ್ತಿರುವ ಕೃಷಿ ಪದ್ಧತಿಗಳನ್ನು ಕರ್ನಾಟಕದಲ್ಲಿಯೂ ಅಳವಡಿಸಿಕೊಳ್ಳಬಹುದಾಗಿದೆ. ರೈತರಿಗೆ ಇದರಿಂದ ಅಪಾರ ಪ್ರಮಾಣದ ಲಾಭಗಳು ಸಿಗಲಿದೆ ಎಂದು ಇದೇ ವೇಳೆ ರೈತರಿಗೆ ಸಲಹೆ ನೀಡಿದ್ದಾರೆ.
ಇಸ್ರೇಲ್ ದೇಶಕ್ಕೆ ಭೇಟಿ ನೀಡಿ ಅಲ್ಲಿನ ಕೃಷಿ ಚಟುವಟಿಕೆ ಅಧ್ಯಯನ ಮಾಡಿದ್ದೇನೆ. ನಮ್ಮ ರಾಜ್ಯದಲ್ಲಿಯೂ ಇಸ್ರೇಲ್ ಮಾದರಿ ಕೃಷಿಯನ್ನು ತರಬೇಕಂದು ಉದ್ದೇಶಿಸಿದ್ದೇನೆ. ಇದಕ್ಕಾಗಿ ಮಂಡ್ಯದಲ್ಲಿ ಸುಮಾರು 900 ಎಕರೆ ಭೂಮಿಯನ್ನು ಇಸ್ರೇಲ್ ಮಾದರಿ ಕೃಷಿ ಮಾಡಲು ಪ್ರಾಯೋಗಿಕ ಯೋಜನೆಯನ್ನು ಹಮ್ಮಿಕೊಳ್ಳಲಾಗುವುದು. ನಮ್ಮ ರೈತರಿಗೆ ನೆರವು ನೀಡಲು ಇಸ್ರೇಲ್ ಪರಿಣಿತರನ್ನು ಕರೆತರಲಾಗುವುದು.
ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಸುಮಾರು ರೂ.1,500 ಕೋಟಿ ಬಾಕಿ ಕೊಡಬೇಕಾಗಿದೆ. ಈ ವಿಚಾರದಲ್ಲಿ ಕೇಂದ್ರ ಸರ್ಕಾರವೂ ಮಧ್ಯಪ್ರವೇಶಿಸಬೇಕಾಗಿದ್ದು, ಈ ಬಗ್ಗೆ ಕೇಂದ್ರದೊಂದಿಗೆ ಮಾತುಕತೆ ನಡೆಸುತ್ತೇನೆಂದು ಭರವಸೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics