ಬೆಂಗಳೂರು; ನಗರದಲ್ಲಿ ಮೊಬೈಲ್ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆ ನೀಡುತ್ತಿರುವ ಓಲಾ ಮತ್ತು ಉಬರ್ ಕಂಪನಿಗಳು ಪರವಾನಗಿ ನಿಯಮ ಉಲ್ಲಂಘನೆ ಮಾಡುತ್ತಿರುವ ಆರೋಪಗಳು ಕೇಳಿ ಬಂದ ಹಿನ್ನಲೆಯಲ್ಲಿ ಸಾರಿಗೆ ಇಲಾಖೆಯು ಎರಡೂ ಕಂಪನಿಗಳಿಗೂ ವಿವರಣೆ ಕೇಳಿ ಶನಿವಾರ ನೋಟಿಸ್ ಜಾರಿ ಮಾಡಿದೆ.
ದಿ ಕರ್ನಾಟಕ ಆನ್ ಡಿಮ್ಯಾಂಡ್ ಟ್ರಾನ್ಸ್ ಪೋರ್ಟೇಷನ್ ಟೆಕ್ನಾಲಜಿ ಅಗ್ರಿಗೇಟರ್ಸ್ ರೂಲ್ಸ್ 2016 ನಿಯಮಾವಳಿ ಪ್ರಕಾರ ಓಲಾ ಮತ್ತು ಉಬರ್ ಕಂನಿಗಳಿಗೆ ಟ್ಯಾಕ್ಸಿ ಸೇವೆ ನೀಡಲು ಪರವಾನಗಿ ನೀಡಲಾಗಿದೆ. ಅಂತೆಯೇ ರಾಜ್ಯ ಸರ್ಕಾರವೇ ಕಿಲೋ ಮೀಟರ್ ಆಧಾರದಲ್ಲಿ ಟ್ಯಾಕ್ಸಿ ಪ್ರಯಾಣ ದರಗಳನ್ನು ನಿಗದಿಗೊಳಿಸಿದ್ದು, ಕಂಪನಿಗಳು ಪ್ರಯಾಣಿಕರಿಂದ ಅಷ್ಟೇ ದರ ಪಡೆಯಬೇಕು. ಆದರೆ, ಈ ಕಂಪನಿಗಳು ಸಮಯದ ಆಧಾರದಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ.
ಸಮಯದ ಆಧಾರದ ಅಡಿ ಪ್ರಯಾಣ ದರ ಮತ್ತು ಸರ್ಚ್ ದರಗಳನ್ನು ವಸೂಲಿ ಮಾಡುವುದು ಪರವಾನಗಿ ನಿಯಮದ ಸ್ಪಷ್ಟ ಉಲ್ಲಂಘನಯಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಯಮದ ಪ್ರಕಾರ ಪರವಾನಗಿ ಅಮಾನತು ಅಥವಾ ರದ್ದು ಮಾಡಬಹುದಾಗಿದೆ.
ಹೀಗಾಗಿ ನಿಮ್ಮ ಪರವಾನಗಿ ಏಕೆ ಅಮಾನತು ಅಥವಾ ರದ್ದು ಮಾಡಬಾರದು ಎಂದು ಸಾರಿಗೆ ಇಲಾಖೆಯು ಎರಡೂ ಕಂಪನಿಗಳಿಗೆ ನೋಟಿಸ್ ಜಾರಿ ಮಾಡಿದ್ದು, ವಿವರಣೆ ಕೇಳಿದೆ ಎಂದು ತಿಳಿದುಬಂದಿದೆ.
ಎರಡೂ ಕಂಪನಿಗಳೂ ಈ ಬಗ್ಗೆ ವಿವರಣೆ ನೀಡಿದ ಬಳಿತ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಇಲಾಖೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics