ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವರ್ಷ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಂತೆ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಈ ವರ್ಷ ಜಾರಿಗೆ ಬರುವುದು ಅನುಮಾನ ಎನ್ನಲಾಗಿದೆ. ರಾಜ್ಯ ಹಣಕಾಸು ಇಲಾಖೆ ಈ ಯೋಜನೆಗಾಗಿ ಹಣ ಬಿಡುಗಡೆ ಮಾಡದ ಕಾರಣ ವಿದ್ಯಾರ್ಥಿಗಳಿಗೆ ಈ ವರ್ಷ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸುವುದು ಕಠಿಣವಾಗಲಿದೆ. ಇತ್ತ ಸಾರಿಗೆ ಇಲಾಖೆ ಸಹ ಯೋಜನೆ ಜಾರಿ ಸಂಬಂಧ ಇದುವರೆಗೆ ಯಾವ ಸಂದೇಶವನ್ನೂ ಸ್ವೀಕರಿಸಿಲ್ಲ.
"ಪ್ರಸ್ತಾವಿತ ಯೋಜನೆಯಡಿಯಲ್ಲಿ ನಾವು ರಾಜ್ಯದಾದ್ಯಂತ ಕನಿಷ್ಠ 20 ಲಕ್ಷ ವಿದ್ಯಾರ್ಥಿಗಳನ್ನು ಒಳಗೊಳ್ಳಬೇಕಾಗಲಿದೆ. ಅವರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಒದಗಿಸಲು 629 ಕೋಟಿ ರೂ. ವೆಚ್ಚ ತಗುಲಬಹುದು, ಆದರೆ ಇಲ್ಲಿಯವರೆಗೆ ಸರ್ಕಾರ ಅಥವಾ ಹಣಕಾಸು ಇಲಾಖೆಯಿಂದ ನಮಗೆ ಯಾವ ನಿರ್ದೇಶನ ಬಂದಿಲ್ಲ" ಸಾರಿಗೆ ಇಲಾಖೆ ಅಧಿಕೃತ ಮೂಲಗಳು ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದೆ.
ಈ ನಡುವೆ ಬೇಸಿಗೆ ರಜೆ ಮುಗಿದು ಶಾಲಾ ಕಾಲೇಜುಗಳು ಪ್ರಾರಂಭವಾಗಿದ್ದು ಪದವಿ ಹಾಗೂ ಪದವಿ ಪೂರ್ವ ತರಗತಿಗಳಿಗೆ ದಾಖಲಾತಿಗಳು ಸಹ ನಡೆಯುತ್ತಿದೆ."ನನಗೆ ಬಿಎಸ್ಸಿ ವ್ಯಾಸಂಗಕ್ಕಾಗಿ ಕೆ.ಆರ್. ಸರ್ಕಲ್ ನಲ್ಲಿರುವ ಕಾಲೇಜಿನಲ್ಲಿ ಸೀಟು ಸಿಕ್ಕಿದ್ದು ನಾನು ಪ್ರತಿದಿನ ದೇವನಹಳ್ಳಿಯಿಂದ ಅಲ್ಲಿಗೆ ಪ್ರಯಾಣ ಮಾಡಬೇಕು. ಇದುವರೆಗೆ ಉಚಿತ ಬಸ್ ಪಾಸ್ ಬಗ್ಗೆ ಯಾವ ಮಾಹಿತಿ ಸಿಕ್ಕಿಲ. ನನಗೆ ಎಂದಿನ ಪಾಸ್ ಖರೀದಿ ನಡೆಸುವಂತೆ ಹೇಳಲಾಗುತ್ತಿದೆ" ವಿದ್ಯಾರ್ಥಿಯೊಬ್ಬರು ಹೇಳಿದರು.
ಸರ್ಕಾರದ ಬೆಂಬಲವಿಲ್ಲದೆ ಸಾರಿಗೆ ಇಲಾಖೆ ಈ ಯೋಜನೆ ಜಾರಿಗೊಳಿಸುವುದು ಅಸಾಧ್ಯ. ಇದರಿಂದಾಗುವ ನಷ್ಟ ಭರಿಸಲು ಸಾರಿಗೆ ಇಲಾಖೆ ಕೈನಲ್ಲಿ ಸಾಧ್ಯವಾಗದು ಎಂದು ರಾಜ್ಯ ಸಾರಿಗೆ ವಿಭಾಗದ ಪ್ರಧಾನ ಕಾರ್ಯದರ್ಶಿ ಬಿ. ಬಸವರಾಜು ಹೇಳಿದ್ದಾರೆ." ಇದು ಹಿಂದಿನ ಸರ್ಕಾರ ಘೋಷಿಸಿದ ಒಂದು ಯೋಜನೆ ಮತ್ತು ಹೊಸ ಸರ್ಕಾರ ಆ ಯೋಜನೆಯನ್ನು ಮುಂದುವರಿಸುವುದೆ ಎನ್ನುವುದು ಹೇಳಲು ಸಾಧ್ಯವಿಲ್ಲ, ಹಾಗಾಗಿ ಉಚಿತ ಬಸ್ ಪಾಸ್ ವಿತರಣೆ ಅಸಾಧ್ಯ" ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ರಾಜ್ಯದ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಬೇಕೆನ್ನುವುದು ರಾಜ್ಯಾದ್ಯಂತದ ವಿದ್ಯಾರ್ಥಿ ಸಂಘಟನೆಗಳ ಬಹುದೀರ್ಘ ಕಾಲದ ಬೇಡಿಕೆಯಾಗಿತ್ತು. ಅಂತಿಮವಾಗಿ ಈ ಯೋಜನೆ ಸಿದ್ದರಾಮಯ್ಯನವರ 2018-19 ವಾರ್ಷಿಕ ಬಜೆಟ್ ನಲ್ಲಿ ಪ್ರಸ್ತಾಪಗೊಂಡಿತ್ತು. ಆದರೆ ಇದೀಗ ಸರ್ಕಾರ ಬದಲಾದ ಕಾರಣ ಯೋಜನೆ ಜಾರಿಯಾಗುವುದು ಅನಿಶ್ಚಿತವೆನ್ನಲಾಗುತ್ತಿದೆ.