ಬೆಂಗಳೂರು: ಪೊಲೀಸ್ ಪೇದೆಗೆ ಚಾಕುವಿನಿಂದ ಚುಚ್ಚಿ ಪರಾರಿಯಾಗಲು ಯತ್ನಿಸಿದ್ದ ರೌಡಿ ಶರವಣ ಅಲಿಯಾಸ್ ತರುಣ್ (21) ಎಂಬಾತನ ಮೇಲೆ ವಿಜಯನಗರ ಠಾಣೆಯ ಇನ್‌ಸ್ಪೆಕ್ಟರ್ ಗುಂಡು ಹಾರಿಸಿದ್ದಾರೆ.
ಮಂಗಳವಾರ ನಸುಕಿನಲ್ಲಿ ಈ ಘಟನೆ ನಡೆದಿದೆ. ರೌಡಿಯ ಎಡಗಾಲಿಗೆ ಗುಂಡು ತಗುಲಿದೆ. ಆತನಿಂದ ಹಲ್ಲೆಗೀಡಾಗಿ ಗಾಯಗೊಂಡಿರುವ ಕಾನ್‌ಸ್ಟೆಬಲ್ ಶ್ರೀನಿವಾಸಮೂರ್ತಿ ಅವರಿಗೆ ವಿಜಯನಗರದ ಗಾಯತ್ರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ..
ವಿಜಯನಗರದ ನಿವಾಸಿ ಪ್ರವೀಣ್ ಎಂಬುವರು ಮೇ 21 ರಂದು ರಾತ್ರಿ 8.45 ಗಂಟೆಗೆ ಪಟ್ಟೆಗಾರಪಾಳ್ಯ ರಸ್ತೆಯಲ್ಲಿ ಹೋಗುತ್ತಿದ್ದರು. ಅವರನ್ನು ಅಡ್ಡಗಟ್ಟಿದ್ದ ಶರವಣ ಹಾಗೂ ಆತನ ಸಹಚರರು, ರು 15 ಸಾವಿರ ಮೌಲ್ಯದ ಮೊಬೈಲ್ ಹಾಗೂ ಯುಪಿಎಸ್ ಸಿಸ್ಟಮ್ ಕಿತ್ತೊಯ್ದಿದ್ದರು. ಅದೇ ಆರೋಪಿಗಳು, ಜೂನ್ 2ರಂದು ಕಾಮಾಕ್ಷಿಪಾಳ್ಯದಲ್ಲಿ ವ್ಯಕ್ತಿಯೊಬ್ಬರಿಂದ ರು,3 ಲಕ್ಷ ನಗದು ಸುಲಿಗೆ ಮಾಡಿದ್ದರು.
ಈ ಬಗ್ಗೆ ವಿಜಯನಗರ ಹಾಗೂ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣಗಳು ದಾಖಲಾಗಿದ್ದವು
ರೌಡಿ ಶರವಣ ಸಹಚರರಾದ ಬಿ.ಎಂ.ಪ್ರದೀಪ್ ಹಾಗೂ ಅಕ್ಷಯ್ ಎಂಬಾತನನ್ನು ಇತ್ತೀಚೆಗಷ್ಟೇ ಬಂಧಿಸಲಾಗಿತ್ತು.
ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಶರವಣ ಹೆಸರು ಬಾಯ್ಬಿಟ್ಟಿದ್ದರು. ಅಂದಿನಿಂದಲೇ ರೌಡಿ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿತ್ತು.
ಚಾಲಕನಾಗಿದ್ದ ಶರವಣ, ತನ್ನ ಆಟೊದಲ್ಲಿ ಮಂಗಳವಾರ ನಸುಕಿನ 1 ಗಂಟೆ ಸುಮಾರಿಗೆ ಸುಮನಹಳ್ಳಿ ಹೊರವರ್ತುಲ ರಸ್ತೆಯ ಮೂಲಕ ಕಾಮಾಕ್ಷಿಪಾಳ್ಯದತ್ತ ಹೊರಟಿದ್ದ. ಆ ಮಾಹಿತಿ ತಿಳಿದು ಸ್ಥಳಕ್ಕೆ ಹೋಗಿದ್ದ ಇನ್‌ಸ್ಪೆಕ್ಟರ್ ನಾಗೇಶ್ ಹಾಗೂ ಕಾನ್‌ಸ್ಟೆಬಲ್ ಶ್ರೀನಿವಾಸಮೂರ್ತಿ, ಆಟೊ ಹಿಂಬಾಲಿಸಿದ್ದರು. ಪೇಟೆ ಚನ್ನಪ್ಪ ಇಂಡಸ್ಟ್ರಿಯಲ್ ಎಸ್ಟೇಟ್ ಹಿಂಭಾಗದಲ್ಲಿ ಆಟೊವನ್ನು ಅಡ್ಡಗಟ್ಟಿ ಆರೋಪಿಯನ್ನು ಹಿಡಿದುಕೊಳ್ಳಲು ಮುಂದಾಗಿದ್ದರು.
ಆಗ ಶರವಣ, ಚಾಕುವಿನಿಂದ ಕಾನ್‌ಸ್ಟೆಬಲ್ ಅವರ ಕೈಗೆ ಚುಚ್ಚಿ ಕೊಲೆಗೆ ಯತ್ನಿಸಿದ್ದ. ಅದನ್ನು ಬಿಡಿಸಲು ಹೋದ ನಾಗೇಶ್‌ಗೂ ಚಾಕು ತೋರಿಸಿ ಬೆದರಿಸಿದ್ದ. ಈ ವೇಳೆ ನಾಗೇಶ್, ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದರು. ಅದಾದ ಬಳಿಕವೂ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಪ್ರಯತ್ನಿಸಿದ್ದ. ಆಗ ಆತ್ಮರಕ್ಷಣೆಗಾಗಿ ನಾಗೇಶ್, ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos