ರಾಜ್ಯ

ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಗಾಗಿ ಸಕಲ ಸಿದ್ಧತೆ

Nagaraja AB

ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆಸಲು ರಾಜ್ಯ ಚುನಾವಣಾ ಆಯೋಗ ಹಾಗೂ ಪೊಲೀಸರು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ.

ಚುನಾವಣೆ ಕುರಿತಂತೆ ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಬಿಬಿಎಂಪಿ ಆಯುಕ್ತ  ಎಂ. ಮಹೇಶ್ವರ್ ರಾವ್,  ಮತದಾನ ಜಾಗೃತಿ ಮೂಡಿಸಲು ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ.  ವಾರ್ಡ್ ವಾರು ಆಟೋದೊಂದಿಗೆ   ಸಾರ್ವಜನಿಕರಿಗೆ ಅರಿವು ಮೂಡಿಸುವ ವ್ಯವಸ್ಥೆ ಮಾಡಲಾಗಿತ್ತು ಎಂದರು.

ಇವಿಎಂ ಮತ್ತು ವಿವಿಪ್ಯಾಟ್  ವ್ಯವಸ್ಥೆ ಕುರಿತಂತೆ ಮತದಾರರಿಗೆ ಶಿಕ್ಷಣ ನೀಡಲಾಗಿದೆ. ಇವುಗಳ ಬಳಕೆ ಕುರಿತಂತೆ ಸ್ವೀಪ್, ಹಾಗೂ ತರಬೇತುದಾರರು  ಸಾರ್ವಜನಿಕರಿಗೆ  ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.ಮತದಾನದ ದಿನವೂ ಸಹ ಆಟೋದೊಂದಿಗೆ ಸಾರ್ವಜನಿಕರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಸೋಮವಾರ ಬೆಳ್ಳಿಗೆ 7 ರಿಂದ ಸಂಜೆ 6 ರವರೆಗೂ ಮತದಾನ ನಡೆಯಲಿದ್ದು, ಬುಧವಾರ ಎಸ್ ಎಸ್ ಎಂ ಆರ್ ವಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ.  19 ಅಭ್ಯರ್ಥಿಗಳು ಕಣದಲ್ಲಿದ್ದು, 216 ಮತಗಟ್ಟೆಗಳ ಪೈಕಿ  ಐದು ಮತಗಟ್ಟೆಗಳನ್ನು ಸಖಿ ಪಿಂಕ್  ಮತಗಟ್ಟೆಗಳೆಂದು ಪರಿಗಣಿಸಲಾಗಿದ್ದು, ಅದರಲ್ಲಿ ಮಹಿಳಾ ಸಿಬ್ಬಂದಿ ಮಾತ್ರ ಇರಲಿದ್ದು, ಮಹಿಳೆಯರು  ಮಾತ್ರ ಮತ ಚಲಾಯಿಸುವಂತೆ ಅವಕಾಶ ಮಾಡಿಕೊಡಲಾಗುವುದು ಎಂದರು.

50  ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಸೌಲಭ್ಯ ಕಲ್ಪಿಸಲಾಗುವುದು, ಸೂಕ್ಷ್ಮ ಮತಗಟ್ಟೆಗಳಲ್ಲಿ  60 ಸೂಕ್ಷ್ಮ ವೀಕ್ಷಕರನ್ನು  ನಿಯೋಜಿಸಲಾಗುವುದು, 51 ದಿವ್ಯಾಂಗ ಮತದಾರರಿದ್ದು, ಅವರಿಗೆ  ವೀಲ್ ಚೇರ್ ಸೌಕರ್ಯ ನೀಡಲಾಗುವುದು, ಮೊದಲ ಬಾರಿಗೆ ಮತಗಟ್ಟೆಯ ಸಿಬ್ಬಂದಿಗೆ  ಬೆಡ್, ತಲೆದಿಂಬು , ವೈದ್ಯಕೀಯ ಪೆಟ್ಟಿಗೆಯನ್ನು ಒದಗಿಸಲಾಗುತ್ತಿದೆ  ಎಂದು ರಾವ್ ತಿಳಿಸಿದರು.
SCROLL FOR NEXT