ಕೊಪ್ಪಳ: "ನಮ್ಮ ದೇಶದಲ್ಲಿ ಜಾತಿ, ಧರ್ಮದ ಜಗಳ ನಿಂತಿಲ್ಲ. ಸಮಾನತೆ ಇಲ್ಲ. ಆದರೆ ಮಕ್ಕಳನ್ನು ಹುಟ್ಟಿಸುವುದರಲ್ಲಿ ನಂಬರ್ ಒನ್" ಮಾಜಿ ಸಚಿವ ಆಂಜನೇಯ ಹೇಳಿದ್ದಾರೆ.
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನಲ್ಲಿ ನಡೆದ ದೇವದಾಸಿ ತಾಯಂದಿರ ಮಕ್ಕಳ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಮಾತನಾಡಿದ ಆಂಜನೇಯ ಮಕ್ಕಳನ್ನು ಹುಟ್ಟಿಸಲು ಭಾರತ ನಂಬರ್ ಒನ್, ಇದಕ್ಕೆ ಯಾವ ಅಡೆ ತಡೆ ಇಲ್ಲ. ಈ ವಿಷಯದಲ್ಲಿ ಯಾರಾದರೂ ಸ್ಪರ್ಧೆ ಇಟ್ಟರೆ ನಮ್ಮವರು ಗೆಲ್ಲುವುದು ಖಚಿತ ಎಂದಿದ್ದಾರೆ.
"ನನಗೆ ಎರಡು ಮಕ್ಕಳು. ಇಬ್ಬರೂ ಹೆಣ್ಣು ಮಕ್ಕಳು.ನನ್ನ ಅಪ್ಪ ಕೂಡ ಇನ್ನೊಂದು ಮಗು ಬೇಕು ಅಂದರು. ಆದರೆ ನಾನು ಒಪ್ಪಲಿಲ್ಲ. ನೀವೂ ಸಹ ಮಕ್ಕಳ ಜನನಕ್ಕೆ ಬ್ರೇಕ್ ಹಾಕಿ." ನವ ಜೋಡಿಗಳಿಗೆ ಮಾಜಿ ಸಚಿವರು ಸಲಹೆ ಮಾಡಿದ್ದಾರೆ.
"ಕಾಯಕವೇ ಕೈಲಾಸ ಎನ್ನುವ ಬಸವಣ್ಣನ ತತ್ವ ಪಾಲಿಸಿ. ದೇವರನ್ನು ಹೆಚ್ಚು ಪೂಜೆ ಮಾಡಬೇಡಿ. ಇಷ್ಟು ದಿನ ಪೂಜೆ ಮಾಡಿ ಹಾಳಾಗಿದ್ದು ಸಾಕು. ಬೇರೆಯವರೆಲ್ಲಾ ಹೋಳಿಗೆ ಪೂಜೆ ಮಾಡಿಸಿಕೊಂಡು ಸುಖವಾಗಿದ್ದಾರೆ.ನೀವು ಮಾತ್ರ ಕುರಿ, ಕೋಣಗಳನ್ನು ಬಲಿ ನೀಡಿ ಹಾಳಾಗುತ್ತಿದ್ದೀರಿ. ಸಾಲ ಮಾಡಿ ಜಾತ್ರೆ, ಹಬ್ಬಗಳನ್ನು ಆಚರಿಸಿ ಕೈಸುಟ್ಟುಕೊಳ್ಳಬೇಡಿ, ದುಷ್ಚಟಗಳಿಗೆ ದಾಸರಾಗಬೇಡಿ" ಅವರು ತಿಳಿಸಿದರು.