ರಾಜ್ಯ

ಮರುಮೌಲ್ಯಮಾಪನ ನಂತರ ವಿದ್ಯಾರ್ಥಿಗಳಿಗೆ 10ರಿಂದ 38ರವರೆಗೆ ಹೆಚ್ಚು ಅಂಕ!

Sumana Upadhyaya

ಬೆಂಗಳೂರು: ದ್ವಿತೀಯ ಪಿಯುಸಿ ಮತ್ತು ಎಸ್ ಎಸ್ಎಲ್ ಸಿ ಉತ್ತರ ಪತ್ರಿಕೆಗಳ ಮರುಮೌಲ್ಯಮಾಪನದಲ್ಲಿ ಹಲವು ಶಿಕ್ಷಕರು ಮೌಲ್ಯಮಾಪನ ಮಾಡುವಾಗ ತಪ್ಪುಗಳನ್ನು ಮಾಡಿರುವುದು ಬೆಳಕಿಗೆ ಬಂದಿದೆ.

ಮರುಮೌಲ್ಯಮಾಪನಕ್ಕೆ ಹಾಕಿದ ನಂತರ ಅನೇಕ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಿರುವುದೇ ಇದಕ್ಕೆ ಸಾಕ್ಷಿಯಾಗಿದೆ. ಎಸ್ಎಸ್ ಎಲ್ ಸಿಯಲ್ಲಿ 2,119 ಉತ್ತರ ಪತ್ರಿಕೆಗಳಲ್ಲಿ 6ರಿಂದ 20 ಅಂಕಗಳು ಸಿಕ್ಕಿದ್ದು, ದ್ವಿತೀಯ ಪಿಯುಸಿಯ 2,451 ಉತ್ತರ ಪತ್ರಿಕೆಗಳಲ್ಲಿ ಮರುಮೌಲ್ಯಮಾಪನದ ನಂತರ 10ರಿಂದ 38 ಅಂಕಗಳು ದೊರಕಿವೆ.

ಮೌಲ್ಯಮಾಪಕರ ತಪ್ಪುಗಳು ಗಮನಕ್ಕೆ ಬಂದ ನಂತರ ಪಿಯುಸಿ ಮತ್ತು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಇಲಾಖೆಯ ಅಧಿಕಾರಿಗಳು ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಯಾವ ಉತ್ತರ ಪತ್ರಿಕೆಯನ್ನು ಯಾರು ಮೌಲ್ಯಮಾಪನ ಮಾಡಿದ್ದಾರೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಅದರ ಆಧಾರದ ಮೇಲೆ ಮೌಲ್ಯಮಾಪನ ಮಾಡಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಅಧಿಕಾರಿಗಳು.

ಇಂತಹ ಶಿಕ್ಷಕರನ್ನು ಮೂರು ವರ್ಷಗಳ ಕಾಲ ಕಪ್ಪು ಪಟ್ಟಿಯಲ್ಲಿಡಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ಧರಿಸಿದೆ. ಅವರಿಗೆ ಮೌಲ್ಯಮಾಪನ ಕೆಲಸ ನೀಡಲಾಗುವುದಿಲ್ಲ. ಪಿಯುಸಿ ಶಿಕ್ಷಣ ಇಲಾಖೆ ಮೌಲ್ಯಮಾಪಕರಿಗೆ ದಂಡದ ಮೊತ್ತವನ್ನು ಹೆಚ್ಚಿಸಲು ನಿರ್ಧರಿಸಿದೆ. ತಪ್ಪು ಮೌಲ್ಯಮಾಪನ ಮಾಡಿದವರಿಗೆ ಪ್ರಸ್ತುತ 2,000 ದಂಡ ಹಾಕಲಾಗುತ್ತಿದ್ದು, ಅದನ್ನು ದ್ವಿಗುಣಗೊಳಿಸುವ ಸಾಧ್ಯತೆಯಿದೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕ ವಿ ಸುಮಂಗಲಾ, ಮರುಮೌಲ್ಯಮಾಪನ ನಂತರ 6 ಅಂಕಗಳು ಹೆಚ್ಚು ಪಡೆದ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡಿದ ಶಿಕ್ಷಕರನ್ನು ಕಪ್ಪುಪಟ್ಟಿಯಲ್ಲಿಡಲು ಯೋಚಿಸುತ್ತಿದ್ದೇವೆ ಎಂದು ಹೇಳಿದರು.

SCROLL FOR NEXT