ಬೆಂಗಳೂರು: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿರುವುದರಿಂದ ಅಣಬೆಗಳಂತೆ ಪ್ರತಿವರ್ಷ ಹುಟ್ಟಿಕೊಳ್ಳುತ್ತಿರುವ ಖಾಸಗಿ ಶಾಲೆಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.ಕನಿಷ್ಠ ಮುಂದಿನ ಮೂರು ವರ್ಷಗಳವರೆಗೆ ರಾಜ್ಯದಲ್ಲಿ ಖಾಸಗಿ ಶಾಲೆಗಳನ್ನು ಸ್ಥಾಪಿಸಲು ಅನುಮತಿ ನೀಡದಿರಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹೊಸ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ಕೋರಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಮಂಡಳಿಗೆ ಬಂದಿರುವ ಅರ್ಜಿಗಳ ಸಂಖ್ಯೆ ಬರೋಬ್ಬರಿ 2,429. ಆದರೆ ಅವುಗಳಿಗೆ ಅನುಮತಿ ಸಿಗುವುದು ಕಷ್ಟ ಎನ್ನುತ್ತಾರೆ ಇಲಾಖೆಯ ಅಧಿಕಾರಿಯೊಬ್ಬರು.
ಇನ್ನೊಂದೆಡೆ ಶಿಕ್ಷಣ ಹಕ್ಕು ಕಾಯ್ದೆಯಿಂದ ಸಹ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯಡಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 25ರಷ್ಟು ಸೀಟುಗಳನ್ನು ಖಾಸಗಿ ಶಾಲೆಗಳಲ್ಲಿ ನೀಡಲಾಗುತ್ತದೆ. ಸರ್ಕಾರಿ ಶಾಲೆಗಳಿರುವ 5 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಖಾಸಗಿ ಶಾಲೆಗಳ ಸಂಖ್ಯೆ ಹೆಚ್ಚಾಗುವುದು ಕೂಡ ಮಕ್ಕಳ ದಾಖಲಾತಿ ಸಂಖ್ಯೆಗೆ ಹಿನ್ನಡೆಯಾಗಿದೆ ಎನ್ನುತ್ತಾರೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು.
ಹೀಗಾಗಿ ಇನ್ನು ಎರಡು ಮೂರು ವರ್ಷಗಳವರೆಗೆ ಯಾವುದೇ ಖಾಸಗಿ ಶಾಲೆಗಳನ್ನು ತೆರೆಯಲು ಅನುಮತಿ ನೀಡದಿರಲು ಇಲಾಖೆ ಮುಂದಾಗಿದೆ. ಈ ಬಗ್ಗೆ ಅಂತಿಮ ನಿರ್ಧಾರ ಇನ್ನೂ ತೆಗೆದುಕೊಂಡಿಲ್ಲ ಎಂದು ಅವರು ಹೇಳುತ್ತಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಖಾತೆ ಸಚಿವ ಎನ್ ಮಹೇಶ್, ಖಾಸಗಿ ಶಾಲೆಗಳ ಸಂಖ್ಯೆಯನ್ನು ತಪಾಸಣೆ ಮಾಡಲು ಇಲಾಖೆ ಮುಂದಾಗಿದೆ. ಹೊಸ ಶಾಲೆಗಳಿಗೆ ಅನುಮತಿ ನೀಡುವ ಮುನ್ನ ಯೋಚನೆ ಮಾಡಬೇಕಾಗಿದೆ. ಸರ್ಕಾರ ಖಾಸಗಿ ಶಾಲೆಗಳ ಮಟ್ಟಕ್ಕೆ ಸಮಾನವಾದ 176 ಮಾದರಿ ಸರ್ಕಾರಿ ಶಾಲೆಗಳನ್ನು ಸ್ಥಾಪಿಸಿದ್ದು ಖಾಸಗಿ ಶಾಲೆಗಳಿಗೆ ಅನುಮತಿ ನೀಡುವ ಬದಲು ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದರು.
ಮುಂದಿನ 5 ವರ್ಷಗಳವರೆಗೆ ಹೊಸ ಖಾಸಗಿ ಶಾಲೆಗಳಿಗೆ ಅನುಮತಿ ನೀಡುವುದಿಲ್ಲ ಎಂದು ಹಿಂದಿನ ಶಿಕ್ಷಣ ಸಚಿವ ತನ್ವೀರ್ ಸೇಠ್ ಕೂಡ ಹೇಳಿದ್ದರು. ಆದರೆ ಖಾಸಗಿ ಶಾಲೆಗಳ ವ್ಯವಸ್ಥಾಪಕರ ಒತ್ತಡದಿಂದಾಗಿ ನಂತರ ತನ್ವೀರ್ ಸೇಠ್ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದರು.
ಖಾಸಗಿ ಶಾಲೆಗಳಿಗೆ ಶುಲ್ಕ ನಿಗದಿ ನಿಯಮ ತರಬೇಕು. ಇದನ್ನು ಖಾಸಗಿ ಶಾಲೆಗಳು ನಿಯಮಬದ್ಧವಾಗಿ ಪಾಲಿಸುವಂತೆ ನೋಡಿಕೊಳ್ಳಬೇಕಿದೆ ಎಂದು ಸಚಿವ ಮಹೇಶ್ ಹೇಳಿದರು.
ಈ ವರ್ಷ ಬಂದಿರುವ 2,429 ಅರ್ಜಿಗಳಲ್ಲಿ ಅಧಿಕ ಬೆಂಗಳೂರು ನಗರದಿಂದ ಆಗಿದ್ದು ಬೆಂಗಳೂರು ದಕ್ಷಿಣದಿಂದ 369 ಅರ್ಜಿಗಳು ಮತ್ತು ಬೆಂಗಳೂರು ಉತ್ತರದಿಂದ 216 ಅರ್ಜಿಗಳು ಸಲ್ಲಿಕೆಯಾಗಿವೆ.