ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮದ ಮೊದಲ ಆರು ಬೋಗಿಗಳ ರೈಲಿಗೆ ರೈಲ್ವೆ ಮಂಡಳಿ ಒಪ್ಪಿಗೆ ಸೂಚಿಸಿದೆ. ಮುಂದಿನ ವಾರದಿಂದ ಸಂಚಾರ ಆರಂಭಿಸಲಿದೆ.
ಸಂಚಾರ ಆರಂಭದ ದಿನ ನಿಗದಿಯಾಗದಿದ್ದರೂ ಕೂಡ ಮುಂದಿನ ವಾರ ಸಂಚರಿಸುವುದು ಖಂಡಿತಾ ಎಂದು ಮೆಟ್ರೊ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ತಿಳಿಸಿದ್ದಾರೆ.
ಈ ವಿಷಯವನ್ನು ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ತಿಳಿಸಿದ್ದು, ಆರು ಬೋಗಿಗಳ ಮೆಟ್ರೋ ರೈಲು ಸಂಚಾರಕ್ಕೆ ರೈಲ್ವೆ ಮಂಡಳಿ ಒಪ್ಪಿಗೆ ಸೂಚಿಸಿದೆ. ಪ್ರತಿ ಗಂಟೆಗೆ 80 ಕಿಲೋ ಮೀಟರ್ ಗರಿಷ್ಠ ವೇಗದಲ್ಲಿ ಮೆಟ್ರೊ ಸಂಚರಿಸಲಿದೆ.
6 ಬೋಗಿ ರೈಲು ಸಂಚಾರ ಆರಂಭಿಸಲಿದ್ದು ಅದರ ಒಂದು ಬೋಗಿ ಪ್ರಯಾಣಿಕರಿಗೆ ಮೀಸಲಿರುತ್ತದೆ. ಅದರಲ್ಲಿ ಸುಮಾರು 1,950 ಪ್ರಯಾಣಿಕರು ಸಂಚರಿಸಲಿದ್ದಾರೆ. ಈಗ ಸಂಚರಿಸುವ ಪ್ರಯಾಣಿಕರಿಗಿಂತ ಎರಡು ಪಟ್ಟು ಹೆಚ್ಚು ಪ್ರಯಾಣಿಕರು ಸಂಚರಿಸಲಿದ್ದಾರೆ ಎಂದರು.