ಬೆಂಗಳೂರು: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಬಹು ಚರ್ಚಿತ ರೈತರ ಸಾಲ ಮನ್ನಾ ಘೋಷಣೆ ವಿಚಾರ ಕೊನೆಗೂ ಒಂದು ತಾರ್ಕಿಕ ಹಂತಕ್ಕೆ ಬಂದು ನಿಲ್ಲುವ ಸಾಧ್ಯತೆ ಕಂಡುಬರುತ್ತಿದೆ. ಜುಲೈ ಮೊದಲ ಅಥವಾ ಎರಡನೇ ವಾರದಲ್ಲಿ ಬಜೆಟ್ ಅಧಿವೇಶನ ಕರೆಯಲಾಗುತ್ತಿದ್ದು ಅಲ್ಲಿ ರೈತರ ಸಾಲ ಮನ್ನಾ ವಿಚಾರವನ್ನು ವೈಜ್ಞಾನಿಕ ವಿಧಾನಗಳ ಮೂಲಕ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ನಿನ್ನೆ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದ ಬೊಕ್ಕಸಕ್ಕೆ ಹಣ ಸಂಗ್ರಹಣೆಗೆ ಮೊದಲು ಸಂಪನ್ಮೂಲ ಎಲ್ಲಿ ಸೋರಿಕೆಯಾಗಿ ಹೋಗುತ್ತಿದೆ ಎಂದು ಕಂಡುಹಿಡಿಯಬೇಕು. ರಾಜ್ಯದ ರೈತರ ಸಾಲವನ್ನು ತೀರಿಸಲು ನಾನು ಕೇಂದ್ರ ಸರ್ಕಾರದ ನೆರವನ್ನು ಕೂಡ ಬಯಸುತ್ತೇನೆ. ರಾಷ್ಟ್ರೀಕೃತ ಬ್ಯಾಂಕುಗಳಿಂದ ಅಧಿಕ ಸಾಲ ಪಡೆದವರು ಸಾಲ ಹಿಂತಿರುಗಿಸದವರಿಂದ ಹಿಂಪಡೆದುಕೊಳ್ಳಲು ಕೇಂದ್ರ ಸರ್ಕಾರ 2 ಲಕ್ಷ ಕೋಟಿ ರೂಪಾಯಿಗಳ ಬೆಲೆ ಬಾಂಡ್ ನ್ನು ಬಿಡುಗಡೆ ಮಾಡುತ್ತಿದೆ. ಅದರಲ್ಲಿ ಶೇಕಡಾ 25ರಷ್ಟು ಹಣವನ್ನು ರೈತರ ಸಾಲಮನ್ನಾ ಪರಿಹಾರಕ್ಕೆ ವಿನಿಯೋಗಿಸುವಂತೆ ಪ್ರಧಾನಿಯವರನ್ನು ಮನವಿ ಮಾಡಿಕೊಳ್ಳುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ರೈತರ ಸಾಲಮನ್ನಾ ವಿಚಾರಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಅದಕ್ಕೆ ಸೂಕ್ತ ಅಧ್ಯಯನ ಮಾಡಬೇಕಾಗುತ್ತದೆ. ಅದು ಎಷ್ಟೇ ಗಾತ್ರದಲ್ಲಿದ್ದರೂ ಕೂಡ ಸಾಲ ಮನ್ನಾ ಜಾರಿಗೊಳಿಸಲಾಗುವುದು, ಇದರ ಲಾಭ ನೇರವಾಗಿ ರೈತರಿಗೆ ಹೋಗಬೇಕು ಅಲ್ಲಿ ಮಧ್ಯವರ್ತಿಗಳ ಹಾವಳಿ ಅಥವಾ ಸಹಕಾರಿ ಬ್ಯಾಂಕುಗಳ ಮಧ್ಯಪ್ರವೇಶವಿರಬಾರದು. ನಿರ್ದಿಷ್ಟ ಸಮಯದೊಳಗೆ ಮತ್ತು ಸಾಲದ ಮನ್ನಾ ಮೊತ್ತವನ್ನು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದರು.
ರೈತರ ಸಾಲ ಮನ್ನಾ ಜಾರಿ ಕುರಿತು ಚರ್ಚಿಸಲು ಸದ್ಯದಲ್ಲಿಯೇ ರಾಷ್ಟ್ರೀಕೃತ ಬ್ಯಾಂಕುಗಳ ಮುಖ್ಯಸ್ಥರ ಸಭೆ ಕರೆಯುವುದಾಗಿ ಹೇಳಿದರು.
ರೈತರ ಸಂಕಷ್ಟಗಳಿಗೆ ಸಾಲ ಮನ್ನಾ ಮಾತ್ರ ಪರಿಹಾರವಾಗುವುದಿಲ್ಲ, ಆದರೆ ಈ ಬಾರಿ ಮಾತ್ರ ಸಾಲಮನ್ನಾ ಮಾಡುವುದು ಅನಿವಾರ್ಯ. ನಮ್ಮಲ್ಲಿನ ಕೃಷಿ ಪದ್ಧತಿಯಲ್ಲಿ ಬದಲಾಗಬೇಕಿದೆ. ವಿಧಾನಸಭೆಯ ಅನುಮೋದನೆ ನಂತರರವಷ್ಟೇ ಸರ್ಕಾರದಿಂದ ಹಣ ಬಿಡುಗಡೆಯಾಗಬಹುದು, ಹೀಗಾಗಿ ರೈತರ ಸಾಲಮನ್ನಾವನ್ನು ಬಜೆಟ್ ನ ಭಾಗವಾಗಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.