ಬೆಂಗಳೂರು: 4ನೇ ವಿಶ್ವಯೋಗ ದಿನಾಚರಣೆಯ ಅಂಗವಾಗಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ ದೇವೇಗೌಡರು ಪ್ರಧಾನಿ ಮೋದಿಯವರು ನೀಡಿದ್ದ ಫಿಟ್ ನೆಸ್ ಚಾಲೆಂಜ್ ಗೆ ಇದೇ ಮೊದಲ ಬಾರಿಗೆ ಮಾಧ್ಯಮಗಳ ಕ್ಯಾಮರಾ ಮುಂದೆ ಯೋಗ ಮಾಡಿದ್ದಾರೆ. ಯೋಗ ಗುರು ಕಾರ್ತಿಕ್ ಮಾರ್ಗದರ್ಶನದಲ್ಲಿ ದೇವೇಗೌಡರು ಯೋಗ ಮಾಡಿದ್ದಾರೆ. 87ರ ಈ ಇಳಿ ವಯಸ್ಸಿನಲ್ಲಿ ಕೂಡ ಯುವಕರು ಕೂಡ ನಾಚುವಂತೆ ವಿವಿಧ ಆಸನಗಳನ್ನು ಪ್ರದರ್ಶಿಸಿ ತೋರಿಸಿದ್ದಾರೆ.
ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ದೇವೇಗೌಡರು, ಇಂದು ವಿಶ್ವ ಯೋಗ ದಿನಾಚರಣೆ. ಮೂರು ವರ್ಷದಿಂದ ಪ್ರಧಾನಿ ಮೋದಿ ಯೋಗ ದಿನವನ್ನು ಆಚರಣೆಗೆ ತಂದಿದ್ದಾರೆ. ಯೋಗ, ಆಸನಗಳನ್ನು ಮಾಡುವ ಪದ್ಧತಿ ಅನಾದಿ ಕಾಲದಿಂದ ಇದ್ದರೂ ಕೂಡ ಮೋದಿಯವರು ಅದಕ್ಕೆ ಒಂದು ಸ್ವರೂಪ ನೀಡಿದ್ದಾರೆ. ಹಿಂದೆ ಋಷಿ-ಮುನಿಗಳು ತಮ್ಮ ಆರೋಗ್ಯವನ್ನು ಯೋಗದಿಂದ ಕಾಪಾಡಿಕೊಳ್ಳುತ್ತಿದ್ದರು. ಹೀಗಾಗಿಯೇ ಅವರು 100, 200 ವರ್ಷಗಳ ಕಾಲ ಬದುಕುತ್ತಿದ್ದರು. ಈಗಲೂ ಇಂತಹ ಸಾಧಕರು ಹಿಮಾಲಯದಲ್ಲಿ ಬದುಕಿದ್ದಾರೆ. ಇದು ಸತ್ಯ ಎಂದು ಹೇಳಿದರು.
ಅದ್ಯಾರೋ ಚೇಂಬರ್ ಆಫ್ ಕಾಮರ್ಸ್ ನವರು ಬಂದು ಪ್ಯಾಲೇಸ್ ಗ್ರೌಂಡ್ ನಲ್ಲಿ ಯೋಗಾ ಡೇ ಮಾಡ್ತೀವಿ, ನೀವು ಬರಬೇಕು ಅಂತ ಆಹ್ವಾನ ನೀಡಿದ್ದರು. ನಾನು ಯಾವಾಗ ನಾನೇ ಯೋಗ ಮಾಡ್ತೀನಿ ಅಂತ ಹೇಳಿದ್ನೋ, ಅವರು ವಾಪಸ್ ಬರಲೇ ಇಲ್ಲ. ಬಹುಶಃ ಮೋದಿ ಅವರಿಗೆ ಫಿಟ್ನೆಸ್ ಚಾಲೆಂಜ್ ಹಾಕ್ತೀನಿ ಅಂತ. ಆದ್ರೆ ನಾನು ಯಾರಿಗೂ ಚಾಲೆಂಜ್ ಹಾಕಲ್ಲ ಎಂದು ಇದೇ ಸಂದರ್ಭದಲ್ಲಿ ಹೇಳಿದರು.
ನಾನು ಆರೋಗ್ಯ ಕಾಪಾಡಲು ನನ್ನದೇ ಆದ ಕೆಲವೊಂದು ನಿಯಮಗಳನ್ನು ಇಟ್ಟುಕೊಂಡಿದ್ದೇನೆ. ಯೋಗದ ಜೊತೆ ಆಹಾರ ಪದ್ಧತಿಯನ್ನು ಕೂಡ ಅಳವಡಿಸಿಕೊಂಡಿದ್ದೇನೆ. ಆದುದರಿಂದ ನಾನು ಇನ್ನೂ ಕೂಡ ಕೆಲಸ ಮಾಡುವ ಮತ್ತು ದುಡಿಮೆ ಮಾಡುವ ಆಸಕ್ತಿ ಹೊಂದಿದ್ದೇನೆ. ಪ್ರಧಾನಿ ಮೋದಿ ಅವರು ಯೋಗಕ್ಕೆ ಒಂದು ಸ್ವರೂಪ ಕೊಟ್ಟಿದ್ದಾರೆ. ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ ಇನ್ನು ಅನೇಕರು ಯೋಗ ಮಾಡುತ್ತಿದ್ದರು ಎಂದು ಮಾಜಿ ಪ್ರಧಾನಿ ದೇವೇಗೌಡ ತಿಳಿಸಿದ್ದಾರೆ.