ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರ ಸೇವೆಯನ್ನು ಮೂರು ತಿಂಗಳವರೆಗೆ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ. ಅವರು ಈಗಾಗಲೇ 3 ತಿಂಗಳ ವಿಸ್ತರಣಾವಧಿ ಸೇವೆಯಲ್ಲಿದ್ದಾರೆ.
ಅವರ ಸೇವಾವಧಿ ಜೂನ್ 30ಕ್ಕೆ ಮುಕ್ತಾಯವಾಗಬೇಕಿತ್ತು. ಇದೀಗ ರಾಜ್ಯ ಸರ್ಕಾರ ಮತ್ತೆ ಮೂರು ತಿಂಗಳ ಅವಧಿಗೆ ಅವರ ಸೇವಾವಧಿಯನ್ನು ವಿಸ್ತರಿಸಿದೆ. ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಹಲವು ಕೆಲಸಗಳಲ್ಲಿ ನಿರತರಾಗಿರುವುದರಿಂದ ಮತ್ತು ಬಜೆಟ್ ಗೆ ತಯಾರಿ ಮಾಡಬೇಕಾಗಿರುವುದರಿಂದ ಮುಖ್ಯ ಕಾರ್ಯದರ್ಶಿಗಳ ಸೇವಾವಧಿಯನ್ನು ವಿಸ್ತರಿಸಲಾಗಿದೆ.
ರತ್ನಪ್ರಭಾ ಅವರ ಸೇವಾವಧಿಯ ವಿಸ್ತರಣೆ ಕೋರಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿಯವರು ಕೇಂದ್ರ ಸರ್ಕಾರಕ್ಕೆ ಅನುಮೋದನೆಗೆ ಪತ್ರ ಬರೆದಿದ್ದು ಸೆಪ್ಟೆಂಬರ್ ವರೆಗೆ ಅವರ ಸೇವೆ ಸರ್ಕಾರಕ್ಕೆ ಅಗತ್ಯವಾಗಿದೆ ಎಂದು ಹೇಳಿದ್ದಾರೆ.
ಈ ಹಿಂದೆ ರತ್ನಪ್ರಭಾ ಅವರ ಸೇವಾವಧಿ ವಿಸ್ತರಣೆಯನ್ನು ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡರು ವಿರೋಧಿಸಿದ್ದರು. ಇದೀಗ ಆಡಳಿತದ ಕೆಲಸಗಳನ್ನು ಪರಿಗಣನೆಗೆ ತೆಗೆದುಕೊಂಡು ಅವರು ಒಪ್ಪಿಕೊಂಡಿರಬಹುದು ಎನ್ನಲಾಗುತ್ತಿದೆ.