ಬೆಂಗಳೂರು: ನಮ್ಮ ರಾಜ್ಯದ ರೈತರು ಯಾವ ಬೆಳೆ ಬೆಳೆಯಬೇಕು ಎಂಬುದನ್ನು ಕಾವೇರಿ ಮಂಡಳಿ ನಿರ್ದೇಶನ ನೀಡುವಂತಿಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಾವೇರಿ ವಿಚಾರವಾಗಿ ಮಾತನಾಡಿದ ಅವರು, 'ಕಾವೇರಿ ಅಚ್ಚುಕಟ್ಟಿನ ರೈತರು ಪ್ರತಿ ವರ್ಷ ಇಂತಹುದೇ ಬೆಳೆಯನ್ನು ಬೆಳೆಯುವಂತೆ ಪ್ರಾಧಿಕಾರ ವಿಧಿಸುವುದು ಅತ್ಯಂತ ಅವಾಸ್ತವಿಕ, ಅಸಂಬದ್ಧ ಅಂಶ ಎಂದು ಕಿಡಿಕಾರಿದ್ದಾರೆ.
'ರೈತರ ಹೊಲ ಗದ್ದೆಗಳಿಗೆ ಪ್ರತಿ ಹತ್ತು ದಿನಗಳಿಗೊಮ್ಮೆ ಮಾತ್ರವೇ ನೀರು ಬಿಡಬೇಕು ಎಂಬ ಅಂಶದಲ್ಲಿ ಅರ್ಥವಿಲ್ಲ. ನಾವು ನದಿ ಕಣಿವೆಯ ಮೇಲ್ಭಾಗದ ರಾಜ್ಯ. ನಮ್ಮ ಪಾಲಿನ ನೀರನ್ನು ನಾವು ಹೇಗೆ ಬೇಕಾದರೂ ಬಳಸುವ ಸ್ವಾತಂತ್ರ್ಯ ನೀಡಬೇಕು. ಹತ್ತು ದಿನಗಳಿಗೊಮ್ಮೆ ನಮ್ಮ ಜಲಾಶಯಗಳಲ್ಲಿ ನೀರಿನ ಲಭ್ಯತೆ ಅಳತೆ ಮಾಡುವ ಅಂಶವೂ ಅರ್ಥವಿಲ್ಲದ್ದು. ಇಂತಹ ಅವೈಜ್ಞಾನಿಕ ಷರತ್ತುಗಳನ್ನು ಹಾಕಿದರೆ ಒಕ್ಕೂಟ ವ್ಯವಸ್ಥೆಯಲ್ಲಿ ಜನರು ನಂಬಿಕೆ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ.
'ನೂರಾರು ವರ್ಷಗಳಿಂದ ರಾಜ್ಯದ ರೈತರು ಅವರದೇ ಆದ ಬೆಳೆ ಪದ್ಧತಿ ಅನುಸರಿಸಿಕೊಂಡು ಬಂದಿದ್ದಾರೆ. ಇಂತಹುದೇ ಬೆಳೆ ಬೆಳೆಯಬೇಕೆಂದು ನಿರ್ಬಂಧ ವಿಧಿಸುವ ಯಾವುದೇ ಕ್ರಮಕ್ಕೆ ರೈತರಿಂದ ಭಾರೀ ಪ್ರತಿಭಟನೆ ವ್ಯಕ್ತವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ಉಂಟಾಗುವುದು ನಿಶ್ಚಿತ. ರೈತರು ನೀರಿನ ಬೆಲೆ ಅರಿತು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ದೀರ್ಘ ಕಾಲ ಹಿಡಿಯಲಿದೆ. ಇಂತಹ ಬದಲಾವಣೆಯನ್ನು ರಾತ್ರೋ ರಾತ್ರಿ ಕಾಣಲು ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics