ಹುಬ್ಬಳ್ಳಿ: ಸರ್ಕಾರಿ ವೈದ್ಯಕೀಯ ಕಾಲೇಜ್ ಗಳಲ್ಲಿ ಉಚಿತ ಸೀಟ್ ಪಡೆಯುವ ವೈದ್ಯಕೀಯ ಪದವೀಧರರಿಗೆ ಗ್ರಾಮೀಣ ಸೇವೆ ಕಡ್ಡಾಯ ಮಾಡಲಾಗುವುದು ಎಂದುವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ. ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.
ಇಂದು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಉತ್ತರ ಕರ್ನಾಟಕ ಆರು ಜಿಲ್ಲೆಗಳ ಜನರಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ಕಿಮ್ಸ್ ಆಸ್ಪತ್ರೆಯನ್ನು ಸ್ವಲ್ಪ ರಿಪೇರಿ ಮಾಡುತ್ತೇನೆ ಎಂದರು.
ಇಲ್ಲಿನ ವೈದ್ಯರು ಉತ್ತಮ ಸೇವೆ ನೀಡುತ್ತಿದ್ದಾರೆ. ಆದರೆ ಹಲವಾರು ಆರೋಪಗಳು ಸಹ ಇವೆ. ನಮ್ಮದೇ ಉಪಕರಣಗಳಿದ್ದರೂ ಅವುಗಳನ್ನು ಬಂದ್ ಮಾಡಿ, ಖಾಸಗಿ ಪ್ರಯೋಗಾಲಯ, ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಕಳುಹಿಸಲಾಗುತ್ತಿದೆ ಎಂಬ ಗಂಭೀರ ಆರೋಪ ಇದೆ. ಅಲ್ಲದೆ ಉಪಕರಣ, ಪೀಠೋಪಕರಣಗಳನ್ನು ಇಲ್ಲಿನ ಸಿಬ್ಬಂದಿಯೇ ಕಳವು ಮಾಡುತ್ತಿದ್ದಾರೆ ಎಂಬ ದೂರುಗಳೂ ಇವೆ ಎಂದರು.
ಸಂಸ್ಥೆಯಲ್ಲಿ ಈಗಾಗಲೇ ಇರುವ ಎಲ್ಲ ಉಪಕರಣಗಳ ಪಟ್ಟಿ ಹಾಗೂ ವಿಡಿಯೋಗ್ರಫಿ ಮಾಡುವಂತೆ ಸೂಚನೆ ನೀಡಿದ್ದೇನೆ. ಇಲ್ಲಿ ಚಿಕಿತ್ಸೆ ಇಲ್ಲದೆ ಖಾಸಗಿ ಆಸ್ಪತ್ರೆಗಳಿಗೆ ಎಷ್ಟು ರೋಗಿಗಳನ್ನು ಕಳುಹಿಸಲಾಗುತ್ತಿದೆ ಎಂಬ ಮಾಹಿತಿಯನ್ನು ಪ್ರತಿ ತಿಂಗಳೂ ನೀಡುವಂತೆ ತಾಕೀತು ಮಾಡಿದ್ದೇನೆ. ಉಪಕರಣವೊಂದು ಕೆಟ್ಟರೆ ಆ ಬಗ್ಗೆ ಸಹ ಸಮಗ್ರ ಮಾಹಿತಿ ಪಡೆಯಲಾಗುವುದು. ಇವುಗಳ ಮೇಲೆ ನಿಗಾ ಇಡಲು ವ್ಯವಸ್ಥೆಯೊಂದನ್ನು ಸಹ ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಇದೇ ವೇಳೆ ಪ್ರತಿ ವೈದ್ಯಕೀಯ ವಿದ್ಯಾರ್ಥಿ ಮೇಲೆ ಸರ್ಕಾರ ಸುಮಾರು 10 ಲಕ್ಷ ರುಪಾಯಿ ವೆಚ್ಚ ಮಾಡುತ್ತಿದೆ. ಹಾಗಿದ್ದ ಮೇಲೆ ಅವರೂ ಸಹ ಈ ಸಮಾಜಕ್ಕೆ ಏನಾದರೂ ನೀಡಲೇಬೇಕು. ಗ್ರಾಮೀಣ ಸೇವೆ ಮಾಡುವುದರಿಂದ ರಾಜ್ಯದ ಜನರಿಗೆ ಅನುಕೂಲವಾಗಲಿದೆ. ದಂಡ ಕಟ್ಟುವ ಆಯ್ಕೆ ನೀಡಿದ್ದು ಸಹ ಸರಿಯಲ್ಲ. ಈ ಬಗ್ಗೆ ಏನು ಮಾಡಬಹುದು ಎಂಬುದರ ಬಗ್ಗೆ ವರದಿ ನೀಡುವಂತೆ ಸೂಚಿಸಿದ್ದೇನೆ ಎಂದರು.
ಪ್ರೈಮರಿ ಶಾಲೆಯ ಪ್ರವೇಶಕ್ಕೆ 30 ಸಾವಿರ ರುಪಾಯಿ ಕಟ್ಟುವ ಸ್ಥಿತಿ ಇದೆ. ಸನ್ನಿವೇಶ ಹೀಗಿರುವಾಗ ವೈದ್ಯಕೀಯ ಕೋರ್ಸ್ ಮಾಡುವವರು ಸ್ವಲ್ಪ ಹೆಚ್ಚು ಶುಲ್ಕ ಕಟ್ಟುವುದರಲ್ಲಿ ತಪ್ಪೇನೂ ಇಲ್ಲ. ಎಲ್ಲವೂ ಉಚಿತ ನೀಡಿದರೆ ವಿದ್ಯಾರ್ಥಿಗಳಿಗೆ ಜವಾಬ್ದಾರಿ ಸಹ ಇರುವುದಿಲ್ಲ ಎಂದು ಹೇಳುವ ಮೂಲಕ ಸಚಿವರು ಶುಲ್ಕ ಹೆಚ್ಚಳದ ಸುಳಿವು ನೀಡಿದ್ದಾರೆ.