ಹಾವೇರಿ: ಪತಿ ಮಹಾಶಯನೊಬ್ಬ ತನ್ನ ಗರ್ಭೀಣಿ ಪತ್ನಿಯನ್ನು ತುಂಗಭದ್ರಾ ನದಿಗೆ ತಳ್ಳಿ ಕೊಲೆ ಮಾಡಲು ಯತ್ನಿಸಿದ್ದು, ಅದೃಷ್ಟವಶಾತ್ ಮಹಿಳೆ ಬದುಕಿಬಂದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಕಳೆದ ಗುರುವಾರ ರಾತ್ರಿ ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಪತ್ತೆಪುರ್ ಸಮೀಪ ಈ ಘಟನೆ ನಡೆದಿದ್ದು, ಆರೋಪಿ ರೂಪೇಶಗೌಡ ತನ್ನ ಗರ್ಭೀಣಿ ಪತ್ನಿಯನ್ನು ತುಂಬಿ ಹರಿಯುತ್ತಿದ್ದ ನದಿಗೆ ತಳ್ಳಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರೂಪೇಶ್ ಗೌಡ ರಟ್ಟಿಹಳ್ಳಿ ತಾಲೂಕಿನ ಚಿಕ್ಕಕಬ್ಬಾರ ಗ್ರಾಮದ ನಿವಾಸಿಯಾಗಿದ್ದು, ಪತ್ನಿ ಅರುಣಾಕುಮಾರಿ ಹತ್ಯೆಗೆ ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಒಂದೂವರೆ ವರ್ಷಗಳ ಹಿಂದೆ ಅರುಣಾಕುಮಾರಿಯನ್ನು ಮದುವೆಯಾಗಿದ್ದ ರೂಪೇಶ್ ಗೌಡ, ಸದ್ಯ ತಮಗೆ ಮಗು ಬೇಡ ಎಂದು ಗರ್ಭೀಣಿ ಪತ್ನಿಯೊಂದಿಗೆ ಜಗಳ ಮಾಡಿದ್ದಾನೆ. ಬಳಿಕ ಉಕ್ಕಡಗಾತ್ರಿಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಪತ್ನಿಯನ್ನು ಹೊರಗಡೆ ಕರೆದುಕೊಂಡು ಹೋಗಿದ್ದಾನೆ. ಹೀಗೆ ಹೋಗುತ್ತಿದ್ದಾಗ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ನಂದಿಗುಡಿ ಬಳಿ ಇರುವ ತುಂಗಭದ್ರಾ ನದಿ ಸೇತುವೆ ಮೇಲಿಂದ ಪತ್ನಿಯನ್ನು ತಳ್ಳಿದ್ದಾನೆ. ಈ ಮೂಲಕ ಆಕೆಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದ ತೀವ್ರ ಅಸ್ವಸ್ಥವಾಗಿದ್ದ ಮಹಿಳೆಗೆ ರಟ್ಟಿಹಳ್ಳಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಇದೀಗ ನ್ಯಾಯಕ್ಕಾಗಿ ರಟ್ಟಿಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ, ಪತಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics