ಬಂಟ್ವಾಳ: ಫಲ್ಗುಣಿ ನದಿ ಸೇತುವೆ ಕುಸಿತ, ತಪ್ಪಿತು ಭಾರೀ ಅನಾಹುತ
ಬಂಟ್ವಾಳ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಬಂಟ್ವಾಳ-ಮಂಗಳೂರು ನಗರವನ್ನು ಸಂಪರ್ಕಿಸುತ್ತಿದ್ದ ಫಲ್ಗುಣಿ ನದಿ ಸೇತುವೆ ಸೋಮವಾರ ಕುಸಿದು ಬಿದ್ದಿದೆ.
ಬಂಟ್ವಾಳ ತಾಲೂಕಿನ ಮೂಲರಘಟ್ಟದಲ್ಲಿ ಫಲ್ಗುಣಿ ನದಿ ಸೇತುವೆಯು ಕುಸಿದಿದೆ. ಸುಮಾರು 40 ವರ್ಷ ಹಳೆಯದಾದ ಬೃಹತ್ ಸೇತುವೆಯ ಪಿಲ್ಲರ್ ಸಂಜೆ 6.45ರ ಸುಮಾರಿಗೆ ಕುಸಿದಿದೆ.
ಮೂಡಬಿದಿರೆ ಸಮೀಪ ಎಡಪದವು, ಕುಪ್ಪೆಪದವು ಮಾರ್ಗದಿಂದ ಬಂಟ್ವಾಳವನ್ನು ಸಂಪರ್ಕಿಸುವ ಮಾರ್ಗದಲ್ಲಿ ಈ ಸೇತುವೆ ಇದ್ದು 250ಮೀ. ಉದ್ದದ ಸೇತುವೆಯ ಅರ್ಧ ಭಾಗ ತುಂಡಾಗಿ ಬಿದ್ದಿದೆ.
ಅದೃಷ್ಟವಶಾತ್ ಈ ಅವಘಡ ಸಂಭವಿಸಿದ ವೇಳೆ ಸೇತುವೆಯ ಮೇಲೆ ಯಾವ ವಾಹನ ಸಂಚಾರ, ಪಾದಚಾರಿಗಳ ಸಂಚಾರವಿರಲಿಲ್ಲ.
ಕಳೆದ ಕೆಲ ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಫಲ್ಗುಣಿ ನದಿ ತುಂಬಿ ಹರಿಯುತ್ತಿದೆ.ನೀರಿನ ರಭಸಕ್ಕೆ ಸಿಕ್ಕ ಸೇತುವೆ ಪಿಲ್ಲರ್ ಗಳು ಕುಸಿದಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
7 ಅಂಕಣಗಳಿದ್ದ ಈ ಸೇತುವೆಯ 2 ಅಂಕಣಗಳು ಕುಸಿದಿದೆ. ಇನ್ನೂ 5 ಅಂಕಣ ಕುಸಿತದ ಭೀತಿಯಲ್ಲಿದೆ ಎಂದು ತಿಳಿದುಬಂದಿದೆ. ಮಳೆಗಾಲ ಕಳೆದ ಬಳಿಕವೇ ದುರಸ್ತಿ ಕಾರ್ಯ ಕೈಗೊಳ್ಳಬೇಕಿದೆ ಎಂದು ಲೋಕೋಪಯೋಗಿ ಅಧಿಕಾರಿಗಳು ಹೇಳಿದ್ದಾರೆ.
ಸೇತುವೆ ಕುಸಿತದಿಂದ ಬಂಟ್ವಾಳ ತಾಲೂಕಿನ ಬಡಬೆಳ್ಳೂರು, ಅರಳ ಹಾಗೂ ಮುತ್ತೂರು ಕೊಳವೂರು ನೇರ ಸಂಪರ್ಕ ಕಡಿತವಾಗಿದೆ. ಸೋರ್ನಾಡಿನಿಂದ ಕುಪ್ಪೆಪದವಿಗೆ ಸಂಚರಿಸು ವವರು ಮಾರ್ಗ ಬದಲಾವಣೆ ಮಾಡಬೇಕಿದೆ.ಬಂಟ್ವಾಳ ತಾಲೂಕಿನ ಸೊರ್ನಾಡಿನಿಂದ ಮಂಗಳೂರಿನ ಕುಪ್ಪೆಪದವು, ಕೈಕಂಬ, ಕಟೀಲು, ಇರುವೈಲು, ಎಡಪದವು, ಗಂಜೀಮಠ ಕಡೆಗಳಿಗೆ ತೆರಳಲು ಈ ಮಾರ್ಗ ಅನುಕೂಲವಾಗಿತ್ತು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಮತ್ತು ಮಾಜಿ ಸಚಿವ ಬಿ. ರಮಾನಾಥ ರೈ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.