ರಾಜ್ಯ

ಮೀನು ಮಾರುಕಟ್ಟೆಯಲ್ಲಿ ತಪಾಸಣೆ ನಡೆಸಿ; ಪಾಲಿಕೆ ಅಧಿಕಾರಿಗಳಿಗೆ ಬೆಂಗಳೂರು ಮೇಯರ್ ಸೂಚನೆ

Manjula VN
ಬೆಂಗಳೂರು; ಮೀನುಗಳು ತಾಜಾವಾಗಿರಿಸಲು ರಾಸಾಯನಿಕ ಬಳಸಲಾಗುತ್ತಿದೆ ಎಂಬ ಸುದ್ದಿ ಜನತೆಯಲ್ಲಿ ಭಾರೀ ಆತಂಕವನ್ನು ಮೂಡಿಸಿರುವ ಹಿನ್ನಲೆಯಲ್ಲಿ ಎಲ್ಲಾ ಮೀನು ಮಾರಕಟ್ಟೆಯಲ್ಲಿ ತಪಾಸಣೆಗಳನ್ನು ನಡೆಸುವಂತೆ ಪಾಲಿಕೆ ಅಧಿಕಾರಿಗಳಿಗೆ ಬೆಂಗಳೂರು ಮೇಯರ್ ಸಂಪರ್ ರಾಜ್ ಅವರು ಮಂಗಳವಾರ ಸೂಚನೆ ನೀಡಿದ್ದಾರೆ. 
ಕಳೆದ ಶನಿವಾರ ಕೇರಳದಿಂದ ಬಂದಿದ್ದ 6 ಟನ್ ಮೀನುಗಳಲ್ಲಿ ರಾಸಾಯನಿಕ ಇರುವುದು ಪತ್ತೆಯಾಗಿತ್ತು. ಈ ಮೀನುಗಳಲ್ಲಿ ಅಪಾಯಕಾರಿ ರಾಸಾಯನಿಕವನ್ನು ಬಳಕೆ ಮಾಡಲಾಗಿತ್ತು. ಇದು ಮನುಷ್ಯದಲ್ಲಿ ಕ್ಯಾನ್ಸರ್ ರೋಗವನ್ನುಂಟು ಮಾಡುತ್ತದೆ. 
ಮೀನುಗಳು ತಾಜಾವಾಗಿರಲೆಂದು ಬಳಕೆ ಮಾಡಲಾಗುತ್ತಿರುವ ಈ ರಾಸಾಯನಿಕವನ್ನು ಆಸ್ಪತ್ರೆಗಳ ಪ್ರಯೋಗಾಲಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಮೀನುಗಳಿಗೆ ರಾಸಾಯನಿಕ ವಿಷ ಬೆರೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಜನತೆಯಲ್ಲಿ ಭಾರೀ ಆತಂಕವನ್ನುಂಟು ಮಾಡಿದೆ. 
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮೇಯರ್ ಸಂಪತ್ ರಾಜ್ ಅವರು, ಮೀನುಗಳು ತಾಜಾವಾಗಿರಿಸುವ ಸಲುವಾಗಿ ವಿಷಕಾರಿ ರಾಸಾಯನಿಕಗಳನ್ನು ಬಳಕೆ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಪ್ರಮುಖವಾಗಿ ದೂರದ ಪ್ರದೇಶಗಳಿಂದ ಬರುವ ಮೀನುಗಳಿಗೆ ರಾಸಾಯನಿಕ ವಿಷಯವನ್ನು ಸೇರ್ಪಡೆಗೊಳಿಸಲಾಗುತ್ತಿದೆ. ಬೆಂಗಳೂರು ಕೇಂದ್ರೀಯ ವಲಯವಾಗಿದ್ದು, ಕರಾವಳಿ ತೀರ ಪ್ರದೇಶಗಳು, ನೆರೆ ರಾಜ್ಯಗಳಿಂದ ನಗರಕ್ಕೆ ಮೀನುಗಳನ್ನು ಬರುತ್ತವೆ. 
ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ನಗರದ ಎಲ್ಲಾ ಮೀನು ಮಾರುಕಟ್ಟೆಗಳಿಗೆ ತೆರಳಿ ಪರಿಶೀಲನೆ ನಡೆಸುವಂತೆ ತಿಳಿಸಲಾಗಿದೆ. ಮಾರುಕಟ್ಟೆಯಲ್ಲಿರುವ ಮೀನುಗಳನ್ನು ತೆಗೆದುಕೊಂಡು ಅವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡುವಂತೆ ತಿಳಿಸಲಾಗಿದೆ. ಮೀನುಗಳಲ್ಲಿ ರಾಸಾಯನಿಕ ವಿಷ ಅಂಶ ಕಂಡುಬಂದಿದ್ದೇ ಆದರೆ ಅಂತಹ ಅಂಗಡಿಗಳ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ. 
SCROLL FOR NEXT