ರಾಜ್ಯ

ರಾಜ್ಯ ಸರ್ಕಾರದಿಂದ ವರಮಹಾಲಕ್ಷ್ಮಿ ಹಬ್ಬಕ್ಕೆ ಮೈಸೂರು ಸಿಲ್ಕ್ 'ಸೀರೆ ಭಾಗ್ಯ'!

Lingaraj Badiger
ಮೈಸೂರು: ರಾಜ್ಯ ಸರ್ಕಾರ ಈ ಬಾರಿ ವರಮಹಾಲಕ್ಷ್ಮಿ ಹಬ್ಬಕ್ಕೆ ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಲು ಮುಂದಾಗಿದ್ದು, ಕೇವಲ 4,500 ರುಪಾಯಿಗೆ ಮೈಸೂರು ಸಿಲ್ಕ್ ಸೀರೆಯನ್ನು ಮಾರಾಟ ಮಾಡಲಾಗುವುದು ಎಂದು ಪ್ರವಾಸೋದ್ಯಮ ಹಾಗೂ ರೇಷ್ಮೆ ಸಚಿವ ಸಾ.ರಾ. ಮಹೇಶ್ ಅವರು ಶುಕ್ರವಾರ ಹೇಳಿದ್ದಾರೆ. 
ಇಂದು ಮೈಸೂರಿನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಸಚಿವರು, ವರಮಹಾಲಕ್ಷ್ಮಿ ಹಬ್ಬಕ್ಕೆ ಕೇವಲ 4,500 ರುಪಾಯಿ ಉತ್ಕೃಷ್ಟ ದರ್ಜೆಯ ರೇಷ್ಮೆ ಸೀರೆಗಳನ್ನು ಮಾರಾಟ ಮಾಡಲಾಗುತ್ತದೆ ಎಂದರು. 
ಗ್ರಾಹಕರಿಗೆ ತಲಾ ಒಂದು ಸೀರೆ ಮಾತ್ರ ಕೇವಲ 4,500 ರುಪಾಯಿ ಸಿಗಲಿದೆ ಎಂದು ಸಾ.ರಾ.ಮಹೇಶ್ ಅವರು ಹೇಳಿದ್ದಾರೆ.
ಇದೇ ವೇಳೆ ಮೈಸೂರಿನಲ್ಲಿ ತಯಾರಾಗುವ ರೇಷ್ಮೆ ಸೀರೆಗಳನ್ನು ಹೆಚ್ಚು ಸಂಖ್ಯೆಯಲ್ಲಿ ಮಾರಾಟ ಮಾಡುವ ದೃಷ್ಟಿಯಿಂದ ಇತರ ಪ್ರವಾಸಿ ತಾಣಗಳಾದ ಕೆಆರ್ ಎಸ್, ಹಂಪಿ, ಬಾದಾಮಿ, ಶ್ರವಣಬೆಳಗೊಳ ಸೇರಿದಂತೆ ಇತರೆ ಪ್ರವಾಸಿ ಕೇಂದ್ರಗಳಲ್ಲೂ ಮಳಿಗೆಗಳನ್ನು ತೆರೆದು ಮಾರಾಟ ಮಾಡಲಾಗುವುದು ಎಂದರು.
ಮೈಸೂರು ಸಿಲ್ಕ್ ಬ್ರಾಂಡ್ ನ ಉತ್ಕೃಷ್ಟತೆ ಕಾಪಾಡಲು ರಾಜ್ಯ ಸರ್ಕಾರ ಮುಂದಾಗಿದೆ ಎಂದ ಸಚಿವರು, ಮೈಸೂರು ಸಿಲ್ಕ್ ಹೆಸರಿನ ಪೇಟೆಂಟ್ ರಾಜ್ಯ ಸರ್ಕಾರದ್ದಾಗಿದ್ದು, ಖಾಸಗಿ ಒಡೆತನದ ಸಂಸ್ಥೆಗಳಾಗಲಿ ಅಥವಾ ಅಂಗಡಿಗಳಾಗಲಿ ಹೆಸರು ಬಳಕೆ ಮಾಡುವಂತಿಲ್ಲ ಎಂದು ಎಚ್ಚರಿಸಿದರು. 
SCROLL FOR NEXT