ಬೆಂಗಳೂರು: ವೈಟ್ ಪೀಲ್ಡ್ ನ ಪಟ್ಟಂದೂರು ಅಗ್ರಹಾರ ಕೆರೆ ಬಳಿ ನಿರ್ಮಿಸಲಾಗುತ್ತಿರುವ ಡೆಬ್ರಿ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗುವುದು ಎಂದು ಬಿಬಿಎಂಪಿ ಭರವಸೆ ನೀಡಿದೆ.
ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ಪಟ್ಟಂದೂರು ಸುತ್ತಮುತ್ತಲಿನ ನೂರಾರು ನಿವಾಸಿಗಳು ಪ್ರತಿಭಟನೆ ನಡೆಸಿ, ಬಿಡಿಎ ಹಾಗೂ ಬಿಬಿಎಂಪಿಗೆ ಮನವಿ ಸಲ್ಲಿಸಿದ್ದರು.
ಈ ಮನವಿಗೆ ಸ್ಪಂದಿಸಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ , ಡೆಬ್ರಿ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿ ನಿಲ್ಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ತಿಳಿಸಿದ್ದಾರೆ.
ಕೆರೆಯ ಬಪರ್ ವಲಯದಲ್ಲಿ ನಿಯಮಬಾಹಿರವಾಗಿ ರಸ್ತೆ ಹಾಗೂ ಡೆಬ್ರಿ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣದಿಂದ ಕೆರೆ ನಾಶ ಹೊಂದಲಿದೆ ಎಂಬುದು ಇಲ್ಲಿನ ನಿವಾಸಿಗಳ ಆರೋಪವಾಗಿದೆ.
ಅವೈಜ್ಞಾನಿಕ ಡೆಬ್ರಿ ತ್ಯಾಜ್ಯ ನಿರ್ವಹಣಾ ಘಟಕ ಕಾಮಗಾರಿ ನಿರ್ಮಾಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೂ ಮನವಿ ಸಲ್ಲಿಸಲಾಗಿದೆ.
ರಸ್ತೆ ನಿರ್ಮಾಣದಲ್ಲಿ ಹಸಿರು ನ್ಯಾಯಮಂಡಳಿ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಸ್ಥಳೀಯ ನಿವಾಸಿ ಸಂದೀಪ್ ಅನಿರುದ್ಧೀನ್ ತಿಳಿಸಿದ್ದಾರೆ.