ಬೆಂಗಳೂರು: ನಗರದಲ್ಲಿನ ಕೆರೆಗಳನ್ನು ಸಣ್ಣ ನೀರಾವರಿ ಇಲಾಖೆಗೆ ವಹಿಸುವುದನ್ನು ವಿರೋಧಿಸಿ ನಾಗರಿಕ ಸಂಘಟನೆಗಳು ರಾಜ್ಯಪಾಲ ವಜೂಬಾಯಿ ವಾಲಾ ಅವರಿಗೆ ಮನವಿ ಸಲ್ಲಿಸಿವೆ.
ಫೆಬ್ರವರಿ 23 ರಂದು ಉಭಯ ಸದನಗಳಲ್ಲಿ ಅನುಮೋದನೆಗೊಂಡಿರುವ ಕೆರೆ ಅಭಿವೃದ್ಧಿ ಕಾಯ್ದೆ ತಿದ್ದುಪಡಿಗೆ ಸುಮಾರು 30 ನಾಗರಿಕ ಸಂಘಟನೆಗಳು ಸಹಿ ಹಾಕಿರುವ ಮನವಿ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿಸಲಾಯಿತು.
ಸದನದಲ್ಲಿ ಯಾವುದೇ ಚರ್ಚೆ ಇಲ್ಲದೆ ಬಿಲ್ ಪಾಸ್ ಮಾಡಲಾಗಿದೆ . ಇಲ್ಲಿಯವರೆಗೂ ನೀರಾವರಿ ಟ್ಯಾಂಕುಗಳನ್ನು ನಿರ್ವಹಣೆ ಮಾಡುತ್ತಿದ್ದ ಇಲಾಖೆ ಇನ್ನೂ ಮುಂದೆ ಕೆರೆಗಳನ್ನು ನಿರ್ವಹಣೆ ಮಾಡುವುದಾಗಿ ಸಣ್ಣ ನೀರಾವರಿ ಇಲಾಖೆ ಸಚಿವ ಟಿ. ಬಿ. ಜಯಚಂದ್ರ ಹೇಳಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕಾನೂನು ಪ್ರಕಾರ ಸಣ್ಣ ನೀರಾವರಿ ಸಂಸ್ಥೆಗಳು ನಗರ ಸ್ಥಳೀಯ ಸಂಸ್ಥೆ ವ್ಯಾಪ್ತಿಕೊಳ್ಳಪಟ್ಟಿರುತ್ತವೆ. ಚರಂಡಿ ನೀರಿನಿಂದಾಗಿ ಕೆರೆಗಳು ಅಸ್ತಿತ್ವ ಕಳೆದುಕೊಂಡಂತಾಗಿದ್ದು, ಒಳಚರಂಡಿ ಮಂಡಳಿಯ ನೆರವಿನೊಂದಿಗೆ ಬಿಬಿಎಂಪಿ ಚರಂಡಿ ನೀರು ಕೆರೆಗೆ ಸೇರದಂತೆ ನಿಯಂತ್ರಣ ಮಾಡಬೇಕಿದೆ ಎಂದು ತಿಳಿಸಲಾಗಿದೆ.