ರಾಜ್ಯ

ನ್ಯಾಯಮೂರ್ತಿ ಹತ್ಯೆ ಯತ್ನ ಬಳಿಕ ಎಚ್ಚೆತ್ತ ಸರ್ಕಾರ: ಲೋಕಾಯುಕ್ತ ಕಚೇರಿಗೆ ಕೊನೆಗೂ ಬಂತು ಮೆಟಲ್ ಡಿಟೆಕ್ಟರ್

Manjula VN
ಬೆಂಗಳೂರು: ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ್ ಶೆಟ್ಟಿಯವರ ಮೇಲೆ ನಡೆದ ಹತ್ಯೆ ಯತ್ನ ಪ್ರಕರಣದ ಬಳಿಕ ಎಚ್ಚೆತ್ತುಕೊಂಡಿರುವ ಸರ್ಕಾರ, ಲೋಕಾಯುಕ್ತ ಕಚೇರಿಗೆ ಹೊಸ ಮೆಟಲ್ ಡಿಟೆಕ್ಟರ್ ನ್ನು ಅಳವಡಿಸಿದೆ. 
ಮುಖ್ಯ ದ್ವಾರದಲ್ಲಿ ಮೆಟಲ್ ಡಿಟೆಕ್ಟರ್ ಕೆಟ್ಟು ಹೋಗಿದ್ದರು ಲೋಕಾಯುಕ್ತ ಸಂಸ್ಥೆಯ ಅಧಿಕಾರಿಗಳು ತಲೆ ಕೆಡಿಸಿಕೊಂಡಿರಲಿಲ್ಲ. ಸಂಸ್ಥೆಯಲ್ಲಿ ನಡೆದ ದುರಂತದ ಬಳಿಕ ಭದ್ರತಾ ವೈಫಲ್ಯದ ಕುರಿತು ಸಾಕಷ್ಟು ಟೀಕೆಗಳು ಕೇಳಿಬಂದಿತ್ತು. 
ಚಾಕು ಇರಿದ ಪ್ರಕರಣದ ಬಳಿಕ ಮೆಟಲ್ ಡಿಟೆಕ್ಟರ್ ಗಂಭೀರತೆಯನ್ನು ಅರಿದ ಸಿಬ್ಬಂದಿಗಳು ನಿನ್ನೆ ಬೆಳಿಗ್ಗೆಯೇ ಬದಲಿಸಲು ಮುಂದಾದರು. ಪ್ರವೇಶ ದ್ವಾರದಲ್ಲಿದ್ದ ಹಳೆಯ ಡಿಟೆಕ್ಟರ್'ನ್ನು ತೆಗೆದು ಹಾಕಿ ಹೊಸದಾಗಿ ಅಳವಡಿಸಿದರು. ಇದಲ್ಲದೆ ಲೋಕಾಯುಕ್ತ ಕೊಠಡಿಗೆ ತೆರಳುವ ಸ್ಥಳದಲ್ಲಿಯೂ ಮತ್ತೊಂದು ಡಿಟೆಕ್ಟರ್ ಅಳವಡಿಸುವ ಬಗ್ಗೆ ಚಿಂತನೆಗಳು ನಡೆಯುತ್ತಿವೆ ಎಂದು ಮೂಲಗಳು ಮಾಹಿತಿ ನೀಡಿವೆ. 
ಲೋಕಾಯುಕ್ತ ಕಚೇರಿಯಲ್ಲಿ ಒಟ್ಟು 5 ಮಹಡಿಗಳಿದ್ದು , ಪ್ರತೀಯೊಂದು ಮಹಡಿಯಲ್ಲಿಯೂ ಕನಿಷ್ಟ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ, ಕಟ್ಟಡದಲ್ಲಿ ಮತ್ತಷ್ಟು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಚಿಂತನೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ. 
SCROLL FOR NEXT