ಸುಪಾರಿ ಹಂತಕ ಶಶಿಧರ್ ಮುಂಡೆವಾಡಿ ಮತ್ತು ಹಲ್ಲೆಗೊಳಗಾದ ಪಿಎಸೈ
ವಿಜಯಪುರ: ಭೀಮಾ ತೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದ್ದು, ಸುಪಾರಿ ಹಂತಕ ಶಶಿಧರ್ ಮುಂಡೆವಾಡಿ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಅಕ್ರಮ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಶಂಕೆ ಮೇರೆಗೆ ಚಡಚಣ ಬಳಿಯ ಬತಡೋಲ ಬಳಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸುಪಾರಿ ಹಂತಕ ಶಶಿಧರ್ ಮುಂಡೆವಾಡಿ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಮೂಲಗಳ ಪ್ರಕಾರ ಆರೋಪಿ ಶಶಿ ಮುಂಡೆವಾಡಿ ಅಕ್ರಮ ಶಸ್ತ್ರಾಸ್ತ್ರ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಚಡಚಣ ಪಿಎಸ್‌ಐ ಗೋಪಾಲ ಹಳ್ಳೂರ ಹಾಗೂ ಪೇದೆ ಮಾದರ ಆರೋಪಿಗಳ ಬಂಧನಕ್ಕೆ ಯತ್ನಿಸಿದ್ದಾರೆ. ಈ ವೇಳೆ ತಪ್ಪಿಸಿಕೊಳ್ಳುವ ಭರದಲ್ಲಿ ಆರೋಪಿ ಶಶಿಧರ್ ಮುಂಡೆವಾಡಿ ಪಿಎಸೈ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದು, ಪಿಎಸೈ ಮತ್ತು ಪೇದೆ ಕೈಗೆ ಗಾಯಗಳಾಗಿವೆ.
ಈ ವೇಳೆ ಆತ್ಮರಕ್ಷಣೆಗೆಗಾಗಿ ಪೊಲೀಸರು ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದು, ಅದಕ್ಕೂ ಆರೋಪಿ ಶಶಿ ಬಗ್ಗದಾಗ ಆತನ ಕಾಲಿಗೆ ಪಿಎಸೈ ಗೋಪಾಲ ಹಳ್ಳೂರ ಗುಂಡು ಹಾರಿಸಿದ್ದಾರೆ. ಈ ವೇಳೆ ಶಶಿಧರ್ ಮುಂಡೆವಾಡಿ ನೆಲಕ್ಕುರುಳಿದ್ದು, ಗಾಯಾಳು ಪೊಲೀಸರು ಹಾಗೂ ಗಾಯಾಳು ಆರೋಪಿಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೂಲಗಳ ಪ್ರಕಾರ ಪಿಎಸೈ ಗೋಪಾಲ ಹಾಗೂ ಪೇದೆ ಅರವಿಂದ ಮಾದರ ಮೇಲೆ ಹಲ್ಲೆ ಮಾಡಿದ ಕುರಿತು ಚಡಚಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಎಸ್ಪಿ ಶಿವಕುಮಾರ ಗುಣಾರಿ ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ಮಾಡಿದ್ದಾರೆ.
ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪಡೆದಿದ್ದ ಆರೋಪಿ
ಇನ್ನು ಬಂಧಿತ ಆರೋಪಿ ಶಶಿಧರ್ ಮುಂಡೆವಾಡಿ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಪಡೆದಿದ್ದ ಎಂದು ಹೇಳಲಾಗುತ್ತಿದೆ. ಆರೋಪಿ ಭೀಮಾತೀರದ ಹಂತಕ ಶಶಿ ಮುಂಡೆವಾಡಿ ಪತ್ರಕರ್ತ ರವಿ ಬೆಳಗೆರೆ ಅವರ ಆಪ್ತ ಎಂದೂ ಹೇಳಲಾಗುತ್ತಿದೆ. ಶಶಿಧರ ಮುಂಡೆವಾಡಿ ಪತ್ರಕರ್ತ ಸುನಿಲ ಹೆಗ್ಗರವಳ್ಳಿ ಹತ್ಯೆಗೆ ಪತ್ರಕರ್ತ ರವಿ ಬೆಳಗೆರೆ ಯಿಂದ ಸುಪಾರಿ ಪಡೆದ ಆರೋಪ ಎದುರಿಸುತ್ತಿದ್ದಾನೆ.