ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಹಾಯ್ ಬೆಂಗಳೂರು ಪತ್ರಿಕೆಯ ಸಂಪಾದಕ ರವಿಬೆಳಗೆರೆ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಮಾಧ್ಯಮವೊಂದರ ವರದಿ ಮಾಡಿರುವಂತೆ ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಬೆಂಗಳೂರಿನ 2ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದು, ಪ್ರಕರಣದಲ್ಲಿ ಇತ್ತೀಚೆಗೆ ಬಂಧನಕ್ಕೀಡಾದ ಸುಪಾರಿ ಹಂತಕ ಶಶಿಧರ್ ಮುಂಡೆವಾಡಿಯನ್ನು ಮೊದಲ ಆರೋಪಿಯಾಗಿ ನಮೂದಿಸಲಾಗಿದ್ದು, ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ರವಿಬೆಳಗೆರೆ ಅವರನ್ನು ಎರಡನೇ ಆರೋಪಿಯಾಗಿ ನಮೂದಿಸಲಾಗಿದೆ.
ಅಂತೆಯೇ ಮೂರನೇ ಆರೋಪಿಯಾಗಿ ವಿಜು ಬಡಿಗೇರ್ ಎಂದು ಉಲ್ಲೇಖಿಸಲಾಗಿದ್ದು, 3ನೇ ಆರೋಪಿ ವಿಜು ಬಡಿಗೇರ್ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದೆ. ಕಲಂ 120(ಬಿ)-ಅಪರಾಧಿಕ ಒಳಸಂಚು, ಐಪಿಸಿ ಸೆಕ್ಷನ್ 307-ಕೊಲೆಯತ್ನ, 115 ರೆ/ವಿ 34 ಐಪಿಸಿ-ಕೊಲೆ ಮಾಡುವ ಸಮಾನ ಉದ್ದೇಶ, ಕಲಂ 3, 25, 29(ಎ,ಬಿ) ರೆ/ವಿ 30 ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಮೂವರ ವಿರುದ್ಧ ಸಿಸಿಬಿ ಪೊಲೀಸರು 454 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ ಎನ್ನಲಾಗಿದೆ.
ಅಂತೆಯೇ ಚಾರ್ಜ್ ಶೀಟ್ ನಲ್ಲಿ ರವಿಬೆಳಗೆರೆ ಅವರ ಎರಡನೇ ಪತ್ನಿ ಯಶೋಮತಿ ಅವರ ಹೇಳಿಕೆಯನ್ನು 11ನೇ ಸಾಕ್ಷಿಯಾಗಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ.