ರಾಜ್ಯ

ಕೆಲಸದಲ್ಲಿ ಹಸ್ತಕ್ಷೇಪ ಆರೋಪಿಸಿ ಪತ್ರ ಬರೆದಿದ್ದ ಐಪಿಎಸ್ ಅಧಿಕಾರಿಗೆ ನೋಟಿಸ್!

Srinivasamurthy VN
ಬೆಂಗಳೂರು: ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಐಪಿಎಸ್ ಅಧಿಕಾರಿಗಳು ಬರೆದಿರುವ ಪತ್ರಕ್ಕೆ ಸಿಎಂ ಸಿದ್ದರಾಮಯ್ಯ ಕೆಂಡಾಮಂಡಲರಾದ ಬೆನ್ನಲ್ಲೇ ಇದೀಗ ಪತ್ರ ಬರೆದ ಐಪಿಎಸ್ ಅಧಿಕಾರಿ ಆರ್ ಪಿ ಶರ್ಮಾ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ತಿಳಿದುಬಂದಿದೆ.
ಅಧಿಕಾರಿಗಳ ಕಾರ್ಯದಲ್ಲಿ ಸರ್ಕಾರದ ಹಸ್ತಕ್ಷೇಪ, ಉನ್ನತ ಅಧಿಕಾರಿಗಳಿಗೆ ಇಲ್ಲದ ಭದ್ರತೆ ಮುಂತಾದ ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಖಾರವಾಗಿ ಪತ್ರ ಬರೆದಿದ್ದ ಐಪಿಎಸ್ ಅಧಿಕಾರಿ ಆರ್.ಪಿ.ಶರ್ಮಾ ಅವರಿಗೆ ಸರ್ಕಾರ ನೊಟೀಸ್ ನೀಡಿದ್ದು, ಪತ್ರ ಬರೆಯಲು ಇದ್ದ ಕಾರಣವನ್ನು ತಿಳಿಸುವಂತೆ ನೋಟಿಸ್ ಮೂಲಕ ಕೇಳಲಾಗಿದೆ. 
ಮೂಲಗಳ ಪ್ರಕಾರ ಸರ್ಕಾರದ ಮುಖ್ಯಕಾರ್ಯದರ್ಶಿ ಕೆ.ರತ್ನಪ್ರಭಾ ಅವರು ಐಪಿಎಸ್ ಅಧಿಕಾರಿ ಆರ್ ಪಿ ಶರ್ಮಾ ಅವರಿಗೆ ನೊಟೀಸ್ ಜಾರಿ ಮಾಡಿದ್ದು, ನೊಟೀಸ್‌ಗೆ ನಾಳೆಯೊಳಗೆ ಉತ್ತರ ನೀಡದಿದ್ದಲ್ಲಿ ಶರ್ಮಾ ವಿರುದ್ಧ ಯುಪಿಎಸ್‌ಸಿಗೆ ಪತ್ರ ಬರೆಯಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆಯ ಮೇರೆಗೆ ರತ್ನಪ್ರಭಾ ಅವರು ಶರ್ಮಾ ಅವರಿಗೆ ನೊಟೀಸ್ ಜಾರಿ ಮಾಡಿದ್ದು, ಶರ್ಮಾ ಅವರು ನಾಳೆ ಉತ್ತರಿಸದಿದ್ದಲ್ಲಿ ಯುಪಿಎಸ್‌ಸಿಗೆ ಪತ್ರ ರವಾನೆ ಆಗಲಿದೆ. ಹಾಗೂ ಶರ್ಮಾ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ಮನವಿ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ.
ರತ್ನಪ್ರಭಾ ಅವರು ಈಗಾಗಲೇ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರ ಬಳಿ ಘಟನೆ ಸಂಬಂಧ ಮಾತನಾಡಿದ್ದು, ಶರ್ಮಾ ವಿರುದ್ಧ ಯುಪಿಎಸ್‌ಸಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.
ಐಪಿಎಸ್ ಅಧಿಕಾರಿ ಹಾಗೂ ಕರ್ನಾಟಕ ಐಪಿಎಸ್ ಅಧಿಕಾರಿಗಳ ಒಕ್ಕೂಟದ ಅಧ್ಯಕ್ಷರಾಗಿರುವ ಆರ್.ಪಿ.ಶರ್ಮಾ ಅವರು ರಾಜ್ಯದಲ್ಲಿ ಅಧಿಕಾರಿಗಳ ಮೇಲೆ ನಡೆಯುತ್ತಿರುವ ಹಲ್ಲೆ, ಪೊಲೀಸ್ ವ್ಯವಸ್ಥೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ, ಬೇಕಾಬಿಟ್ಟಿ ವರ್ಗಾವಣೆ ಮುಂತಾದವುಗಳ ಬಗ್ಗೆ ಉಲ್ಲೇಖ ಮಾಡಿ ಸರ್ಕಾರ ಅಧಿಕಾರಿಗಳನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂಬ ಅರ್ಥದ ಪತ್ರ ಬರೆದಿದ್ದರು. ಆದಷ್ಟು ಬೇಗ ಸರ್ಕಾರವು ಐಪಿಎಸ್ ಅಧಿಕಾರಿಗಳ ಸಭೆ ಕರೆದು ಈ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕು ಎಂದೂ ಪತ್ರದಲ್ಲಿ ಮನವಿ ಮಾಡಿದ್ದರು. ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದ ಸರ್ಕಾರವು ಈಗ ಶರ್ಮಾ ಅವರಿಗೆ ನೊಟೀಸ್ ಜಾರಿ ಮಾಡಿ ಕಾರಣ ಕೇಳಿದೆ.
SCROLL FOR NEXT