ರಾಜ್ಯ

ರೌಡಿಗಳು, ಅತ್ಯಾಚಾರಿಗಳನ್ನು ಮುಲಾಜಿಲ್ಲದೇ ಶೂಟ್ ಮಾಡಿ: ರಾಮಲಿಂಗಾರೆಡ್ಡಿ

Shilpa D
ಬೆಂಗಳೂರು: ರೌಡಿಗಳು, ಸರಗಳ್ಳರು, ಹಾಗೂ ಅತ್ಯಾಚಾರಿಗಳನ್ನು ಮುಲಾಜಿಲ್ಲದೇ ಶೂಟ್ ಮಾಡುವಂತೆ  ಗೃಹ ಸಚಿವ ರಾಮಲಿಂಗಾ ರೆಡ್ಡಿ ಪೊಲೀಸರಿಗೆ ಸ್ಪಷ್ಟ  ಸಂದೇಶ ರವಾನಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ರೌಡಿಗಳು ಪೊಲೀಸರ ಮೇಲೆ ನಡೆಸಿದ ದಾಳಿ ಹಾಗೂ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿಯ ಮಂಗಳ ಸೂತ್ರವನ್ನು ಸರಗಳ್ಳರು ಅಪಹರಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತ ಪಡಿಸಿದ ಅವರು, ಪೊಲೀಸರಿಗೆ ಗನ್ ನೀಡಿರುವುದು ಅಪರಾಧಿಗಳನ್ನು ಶಿಕ್ಷಿಸಲು ಹೊರತು ಆಭರಣದಂತೆ ಇಟ್ಟುಕೊಳ್ಳುವುದಕ್ಕಲ್ಲ ಎಂದು ಹೇಳಿದ್ದಾರೆ.
ಬಾರ್, ರೆಸ್ಟೋರೆಂಟ್‌ಗಳನ್ನು ನಿಗದಿತ ಸಮಯದೊಳಗೆ ಬಾಗಿಲು ಮುಚ್ಚಿಸಬೇಕು. ವಿದೇಶಿ ಪ್ರಜೆಗಳ ಉಪಟಳಕ್ಕೆ ಕಡಿವಾಣ ಹಾಕಬೇಕು. ಕದ್ದ ಮಾಲುಗಳನ್ನು ಖರೀದಿ ಮಾಡುವವರ ವಿರುದ್ಧವೂ ಪ್ರಕರಣ ದಾಖಲಿಸಲು ನಿರ್ದೇಶನ ನೀಡಿದ್ದೇನೆ. ರೌಡಿಗಳು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುದನ್ನು ಕೇಳಲು ನಾನು ಬಯಸುವುದಿಲ್ಲ, ಇಂಥ ಕ್ರಿಮಿನಲ್ ಗಳನ್ನು ಮಟ್ಟ ಹಾಕುವ ಪೊಲೀಸರ ಬೆನ್ನಿನ ಹಿಂದೆ ನಾನು ಇರುತ್ತೇನೆ ಎಂದು ಹೇಳಿದ್ದಾರೆ.
ಉತ್ತರ ಪ್ರದೇಶದಿಂದ ಬಂದಿರುವ ಸರಗಳ್ಳ ‘ಬವೇರಿಯಾ ಗ್ಯಾಂಗ್’ ಮೇಲೆ ಹದ್ದಿನ ಕಣ್ಣು ಇಡಲಾಗಿದೆ. ಅವರನ್ನು ವಾಪಸ್ ಊರಿಗೆ ಹೋಗಲು ಬಿಡದೆ ಪರಪ್ಪನ ಅಗ್ರಹಾರಕ್ಕೆ ಕಳುಹಿಸಲಾಗುವುದು ಎಂದೂ ಹೇಳಿದರು.
SCROLL FOR NEXT