ಬೆಂಗಳೂರು: ಜಯನಗರ ಮೂರನೇ ಹಂತದಲ್ಲಿರುವ ಡಾಸಾಲ್ಟ್ ಸಿಸ್ಟಮ್ ಬಹುರಾಷ್ಟ್ರೀಯ ಕಂಪನಿಯ ಆವರಣದಲ್ಲಿನ ಕಳಪೆ ಗುಣಮಟ್ಟದ ಗೇಟ್ ಕುಸಿದು ಬಾಲಕನೋರ್ವ ಮೃತಪಟ್ಟಿರುವ ಘಟನೆ ನಿನ್ನೆ ಸಂಜೆ ನಡೆದಿದೆ.
ಕಟ್ಟಡ ಆವರಣದಲ್ಲಿ ಅಳವಡಿಸಲಾಗಿದ್ದ ಮೆಟಲ್ ಗೇಟ್ ಆಟವಾಡುತ್ತಿದ್ದ ಬಾಲಕನ ಮೇಲೆ ಕುಸಿದು ಬಿದ್ದಿದೆ. ಕಂಪನಿಯ ಸಿಬ್ಬಂದಿ ವಿರುದ್ಧ ಪೊಲೀಸರು ನಿರ್ಲಕ್ಷ್ಯ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಂಜುನಾಥ್ ಮೃತಪಟ್ಟ ದುರ್ದೈವಿ. ಆಕೆಯ ತಾಯಿ ಜಯನಗರ ಆರನೇ ಹಂತದಲ್ಲಿ ವಾಸಿಸುತ್ತಿದ್ದು, ಸ್ಥಳೀಯ ಶಾಲೆಯೊಂದರಲ್ಲಿ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನಿಬ್ಬರು ಗೆಳೆಯರೊಂದಿಗೆ ಮಂಜುನಾಥ್ ಆಟವಾಡುತ್ತಿದ್ದಾಗ ಅಲ್ಲಿದ್ದ ಗೇಟ್ ನ್ನು ಅಲ್ಲಾಡಿಸಿದ್ದಾನೆ. ಆಗ ಆತನ ಮೇಲೆ ಗೇಟ್ ಬಿದ್ದು, ತಲೆಗೆ ತೀವ್ರ ಪೆಟ್ಟಾಗಿತ್ತು. ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಆತನ ಇಬ್ಬರು ಸ್ನೇಹಿತರು ಪ್ರಾಣಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂಬಂಧ ಡಾಸಾಲ್ಟ್ ಕಂಪನಿಯ ಆಡಳಿತ ಮಂಡಳಿ ವಿರುದ್ಧ ನಿರ್ಲಕ್ಷ್ಯ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಗೇಟ್ ನ್ನು ಸರಿಯಾಗಿ ಅಳವಡಿಸಿದ್ದರೆ ಈ ದುರಂತ ನಡೆಯುತ್ತಿರಲಿಲ್ಲ ಎಂದು ಮೃತನ ತಾಯಿ ಚಂದ್ರಮ್ಮ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ.
ಪ್ರತ್ಯಕ್ಷದರ್ಶಿ ಆನಂದ್ ಸಿ. ಶಬ್ದ ಕೇಳಿ ಅಲ್ಲಿಗೆ ಧಾವಿಸಿ ನೋಡುವಷ್ಟರಲ್ಲಿ ಗೇಟ್ ಬಾಲಕನ ಮೇಲೆ ಬಿದ್ದಿತ್ತು. ನಂತರ ಸ್ಥಳೀಯರು ಧಾವಿಸಿ ಗೇಟ್ ನ್ನು ತೆರವುಗೊಳಿಸುವಲ್ಲಿ ಸಹಾಯ ಮಾಡಿದರು .ನಂತರ ಸ್ಕೂಟರ್ ವೊಂದರಲ್ಲಿ ಸ್ಥಳೀಯ ಆಸ್ಪತ್ರೆಯೊಂದಕ್ಕೆ ಸಾಗಿಸಲಾಯಿತು. ಆದರೆ. ಅಷ್ಟರಾಗಲೇ ಆತ ಮೃತಪಟ್ಟಿದ್ದ. ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದರು ಎಂದು ವಿವರಿಸಿದರು.