ಬೆಂಗಳೂರು: ಬೆಂಗಳೂರಿನ ನಗರ ಸಾರಿಗೆ - ಬಿಎಂಟಿಸಿ ಬಸ್ ನಲ್ಲಿ ಕಾಮುಕನೊಬ್ಬ ಯುವತಿಗೆ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಕೋರಮಂಗಲದ ಸೋನಿ ವರ್ಲ್ಡ್ ಜಂಕ್ಷನ್ ನಲ್ಲಿ ಮಂಗಳವಾರ (ಮಾರ್ಚ್ 13) ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಅಂದು ರಾತ್ರಿ ತ್ರಿ 8 ಗಂಟೆ ಸುಮಾರಿಗೆ ಕೆಎ57 ಎಫ್ 2654 ನಂಬರಿನ ಬಿಎಂಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಪಕ್ಕದಲ್ಲಿ ಸುಮಾರು 65 ವರ್ಷದ ವೃದ್ಧನೊಬ್ಬ ನಿಂತಿದ್ದ. ಆಗ ಯುವತಿ ನೀವು ಕುಳಿತುಕೊಳ್ಳುವಿರಾ ಎಂದು ವಿಚಾರಿಸಿದ್ದಾಳೆ, ಅದಕ್ಕೆ ಆರೋಪಿ ವೃದ್ಧ ನಿರಾಕರಿಸಿದ್ದಾನೆ. ಅದಾದ ಬಳಿಕ ಯುವತಿ ತನ್ನ ಪಾಡಿಗೆ ಕುಳಿತಿದ್ದಳು. ಆದರೆ ಆರೋಪಿ ತನ್ನ ಪ್ಯಾಂಟ್ ಜಿಪ್ ಸರಿಸಿಆ ಯುವತಿಯ ಕೈಗೆ ಉಜ್ಜುತ್ತಿದ್ದ. ಇದನ್ನು ಗಮನಿಸಿದ ಯುವತಿ ಗಾಬರಿಯಾಗಿದ್ದಲ್ಲದೆ ವೃದ್ಧನಿಗೆ ಎಚ್ಚರಿಕೆಯನ್ನೂ ನೀಡಿದ್ದಾಳೆ. ಆದರೆ ಆರೋಪಿ ತಾನು ಸಂತ್ರಸ್ತೆ ಮೇಲೆಯೇ ಹರಿಹಾಯ್ದಿದ್ದಾನೆ.
ಅದಾಗ ಸಹ ಪ್ರಯಾಣಿಕರು ’ಇವರಿಗೆ ನಿಮ್ಮ ತಂದೆಯ ವಯಸ್ಸು, ಬಿಟ್ಟು ಬಿಡಿ’ ಎಂದಿದ್ದಾರೆ. ಆಕೆ ಸುಮ್ಮನಾಗಿದ್ದಾಳೆ. ಮುಂದೆ ಬಸ್ ಚಾಲಕ ಹಾಗೂ ನಿರ್ವಾಹಕರು ಆರೋಪಿಯನ್ನು ಬಸ್ ನಿಂದ ಇಳಿಸಿ ಕಳಿಸಿದ್ದಾರೆ. ಆದರೆ ಘಟನೆಯಿಂಡ ಮನನೊಂದ ಯುವತಿ ಕೋರಮಂಗಲ ಪೊಲೀಸರಿಗೆ ದೂರು ನೀಡಿದ್ದು ಇದೀಗ ಅಜ್ಞಾತ ವ್ಯಕ್ತಿಯ ವಿರುದ್ಧ ಸೆಕ್ಷನ್ 354 (ಲೈಂಗಿಕ ಕಿರುಕುಳ) ಮತ್ತು ಸೆಕ್ಷನ್ 509ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇದೇ ವೇಳೆ ಎಕ್ಸ್ ಪ್ರೆಸ್ ನೊಡನೆ ಮಾತನಾಡಿದ ಸಂತ್ರಸ್ತ ಯುವತಿ "ಇತರ ಪ್ರಯಾಣಿಕರು ನನ್ನ ಸಹಾಯಕ್ಕೆ ಬರಲಿಲ್ಲ, ಏಕೆಂದರೆ ನನಗೆ ಸ್ಥಳೀಯ ಭಾಷೆ ತಿಳಿದಿಲ್ಲ. ಬಸ್ ಕಂಡಕ್ಟರ್ ಸಹ ನನಗೆ ಸಹಕಾರ ನೀಡಲಿಲ್ಲ. ನನ್ನ ಮೊಬೈಲ್ ನಲ್ಲಿ ಆ ವ್ಯಕ್ತಿಯ ಫೋಟೋ ತೆಗೆದಿಟ್ಟುಕೊಂಡಿದ್ದೇನೆ. ಆ ಚಿತ್ರವನ್ನು ನಾನು ಪೋಲೀಸರೊಡನೆ ಸಹ ಹಂಚಿಕೊಂಡಿದ್ದೇನೆ. ಆದರೆ ಪೋಲೀಸರು ಆರೋಪಿಯನ್ನಿನ್ನೂ ಬಂಧಿಸಿಲ್ಲ ಎನ್ನುವುದು ನನಗೆ ಅಚ್ಚರಿ ತಂದಿದೆ." ಎಂದಿದ್ದಾರೆ.
ಈ ಘಟನೆಯನ್ನು ಬಿಎಂಟಿಸಿ ಅಧಿಕಾರಿಗಳು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿ ಸ್ಪಷ್ಟಪಡಿಸಿದ್ದು ನಾವು ಈ ಸಂಬಂಧ ಬಿಎಂಟಿಸಿ ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ನಮಗೆ ಸಹಕರಿಸುತ್ತಿಲ್ಲ ಎಂದಿದ್ದಾರೆ.