ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಶಿಫಾರಸು: ವೀರಶೈವ-ಲಿಂಗಾಯತ ಪಂಗಡಗಳ ನಡುವೆ ಘರ್ಷಣೆ
ಕಲಬುರಗಿ: ಪ್ರತ್ಯೇಕ ಲಿಂಗಾಯತ ಧರ್ಮ ಪರವಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಬಗ್ಗೆ ಸೋಮವಾರ ರಾಜ್ಯ ಸಚಿವ ಸಂಪುಟ ತೀರ್ಮಾ ಕೈಗೊಳ್ಳುತ್ತಿದ್ದಂತೆಯೇ ರಾಜ್ಯದಾದ್ಯಂತ ಪರ ಹಾಗೂ ವಿರೋಘ ಹೇಳಿಕೆಗಳು ಕೇಳಿ ಬರಲು ಆರಂಭಿಸಿದ್ದವು. ಈ ನಡುವೆ ವಿಜಯೋತ್ಸವ, ಪ್ರತಿಭಟನೆಗಳೂ ಕೂಡ ನಡೆದವು.
ಇದೇ ವೇಳೆ ಪ್ರತಿಭಟನಾ ನಿರತ ವೀರಶೈವ ಹಾಗೂ ವಿಜಯೋತ್ಸವ ಆಚರಿಸುತ್ತಿದ್ದ ಲಿಂಗಾಯತ ಪಂಗಡಗಳ ನಡುವೆ ನಡುಬೀದಿಯಲ್ಲಿಯೇ ಪರಸ್ಪರ ಚಪ್ಪಲಿ ತೋರಿಸಿ ಹೊಡೆದಾಟ ನಡೆಸಿದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಿನ್ನೆ ಸಂಜೆ ನಡೆಯಿತು.
ಪ್ರತ್ಯೇಕ ಧರ್ಮಕ್ಕೆ ರಾಜ್ಯ ಸರ್ಕಾರದ ಶಿಫಾರಸು ವಿರೋಧಿಸಿ ವೀರಸೈವ ಸ್ವಾಭಿಮಾನಿ ಬಳಗದವರು ನಗರದ ಪಟೇಲ್ ವೃತ್ತದಲ್ಲಿ ಹೋರಾಟಕ್ಕಿಳಿದಿದ್ದರು. ವೀರಶೈವ ಸ್ವಾಭಿಮಾನ ಬಳಗದ ಸದಸ್ಯರು ಸಿಎಂ ಸಿದ್ದರಾಮಯ್ಯ, ಸಚಿವ ಎಂ.ಬಿ ಪಾಟೀಲ್, ವಿನಯ್ ಕುಲಕರ್ಣಿ, ಸೇರಿದಂತೆ ಹಲವರ ಪ್ರತಿಕೃತಿಗಳಿಗೆ ಬೆಂಕಿ ಹಚ್ಚಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಕ್ರಮ ಸ್ವಾಗತಿಸಿ ವಿಜಯೋತ್ಸವ ಆಚರಿಸುವ ಸಲುವಾಗಿ ಬಸವಾಭಿಮಾನಿ ಬಳಗದ ಸದಸ್ಯರು ಪಟೇಲ್ ವೃತ್ತಕ್ಕೆ ಆಗಮಿಸಿದರು. ಈ ಹಂತದಲ್ಲೇ ಬಸವಾಭಿಮಾನಿಗಳ ಗುಂಪಿನಿಂದ ಹಲವರು ಮುನ್ನಿಗ್ಗಿ ಬಂದಿ ವೀರಶೈವ ಸ್ವಾಭಿಮಾನ ಬಳಗದ ಮುಖಂಡ ಮಹಾದೇವಪ್ಪಗೌಡ ಪಾಟೀಲ್ ನರಿಬೋಳ್ ಸೇರಿದಂತೆ ಹಲವರ ಮೇಲೆ ಹಲ್ಲೆಗೆ ಮುಂದಾದರು. ಪರಸ್ಪರ ತಳ್ಳಾಟ, ಒಡೆದಾಡ ನಡೆದ ಘಟನೆಗಳೂ ಕೂಡ ನಡೆದವು. ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಘು ಲಾಠಿ ಪ್ರಹಾರರ ನಡೆಸಿ, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹಲವರನ್ನು ವಶಕ್ಕೆ ಪಡೆದುಕೊಂಡರು.