ಬೆಂಗಳೂರು: ಬಿಜೆಪಿ ಪರವಾಗಿ ಕಾಂಗ್ರೆಸ್ ಮುಖಂಡರ ಮೇಲೆ ಆದಾಯ ತೆರಿಗೆ ದಾಳಿ ನಡೆಸುತ್ತಿದ್ದಾರೆ ಎಂಬ ಆರೋಪ ಹೊತ್ತ ಐಟಿ ಅಧಿಕಾರಿ ಬಾಲಕೃಷ್ಣ ಬಿಆರ್ ಅವರ ಬೆಂಬಲಕ್ಕೆ ಆದಾಯ ತೆರಿಗೆ ಇಲಾಖೆ ನಿಂತಿದ್ದು, ಕಾಂಗ್ರೆಸ್ ಮುಖಂಡರ ಮನವಿಯನ್ನು ಉನ್ನತ ಅಧಿಕಾರಿಗಳಿಗೆ ರವಾನೆ ಮಾಡಲಾಗಿದೆ ಎಂದು ಹೇಳಿದೆ.
ಈ ಬಗ್ಗೆ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಆದಾಯ ತೆರಿಗೆಯ ಇಲಾಖೆ ಪ್ರಧಾನ ಆಯುಕ್ತ ರಜನೀಶ್ ಕುಮಾರ್ ಅವರು, ಕಾಂಗ್ರೆಸ್ ಮುಖಂಡ ಮನವಿಯನ್ನು ಉನ್ನತ ಅಧಿಕಾರಿಗಳಿಗೆ ರವಾನೆ ಮಾಡಲಾಗಿದೆ ಎಂದು ಹೇಳಿದರು. ಇದೇ ವೇಳೆ ಕಾಂಗ್ರೆಸ್ ಮುಖಂಡರ ಆರೋಪಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆರೋಪ ಮಾಡುವವರ ಬಾಯಿ ಮುಚ್ಚಿಸಲು ಇಲಾಖೆ ಮುಂದಾಗುವುದಿಲ್ಲ. ಆದರೆ ಹಾಲಿ ನಡೆಯುತ್ತಿರುವ ಐಟಿ ದಾಳಿಯಲ್ಲಿ ಅವರಿಗೆ ಪಕ್ಷಪಾತ ಅಥವಾ ಒಂದು ಪಕ್ಷದ ಪರವಾಗಿ ನಡೆಯುತ್ತಿದೆ ಎಂದು ಅನಿಸಿದರೆ, ಉನ್ನತ ಅಧಿಕಾರಿಗಳಿಗೆ ದೂರು ನೀಡಬಹುದು. ಐಟಿ ಆಧಿಕಾರಿ ಬಾಲಕೃಷ್ಣ ಬಿಆರ್ ಅವರು ತಮ್ಮ ಕರ್ತವ್ಯ ನಿಭಾಯಿಸಿದ್ದು, ಇದರಲ್ಲಿ ಯಾವುದೇ ರೀತಿಯ ಷಡ್ಯಂತ್ರ ಕಂಡುಬಂದಿದೆ ಎಂದು ಯಾರಿಗಾದರೂ ಅನಿಸಿದರೆ ಕೋರ್ಟ್ ಮೆಟ್ಟಿಲೇರಬಹುದು. ಕೋರ್ಟ್ ನಲ್ಲಿ ರಿಟ್ ಅರ್ಜಿ ದಾಖಲಿಸುವ ಮೂಲಕ ದಾಳಿಯನ್ನು ಪ್ರಶ್ನಿಸಬಹುದು ಎಂದು ರಜನೀಶ್ ಕುಮಾರ್ ಹೇಳಿದರು.
ಐಟಿ ಆಧಿಕಾರಿ ವಿರುದ್ಧ ಕೈ ಮುಖಂಡರ ಪ್ರತಿಭಟನೆ, ವರ್ಗಾವಣೆಗೆ ಆಗ್ರಹ
ಇನ್ನು ಐಟಿ ಇಲಾಖೆಯನ್ನು ಅಧಿಕಾರಿ ಬಿಆರ್ ಬಾಲಕೃಷ್ಣ ಅವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಬಿಜೆಪಿ ಪರವಾಗಿ ದಾಳಿಗಳನ್ನು ನಡೆಸುತ್ತಿದ್ದಾರೆ. ಹೀಗಾಗಿ ಕೂಡಲೇ ಅವರನ್ನು ವರ್ಗಾವಣೆ ಮಾಜಬೇಕು ಎಂದು ಆಗ್ರಹಿಸಿ ಕಾಂಗ್ರೆಸ್ ನ ಹಿರಿಯ ಮುಖಂಡರು ನಿನ್ನೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿರುವ ಆದಾಯ ತೆರಿಗೆ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಅಲ್ಲದೆ ಈ ಬಗ್ಗೆ ಐಟಿ ಇಲಾಖೆಗೆ ಮನವಿ ಕೂಡ ನೀಡಿದ್ದ ಕೈ ಮುಖಂಡರು ಒಂದೇ ವಾರದಲ್ಲಿ ಇಬ್ಬರು ಕಾಂಗ್ರೆಸ್ ಮುಖಂಡರ ಮನೆ ಮೇಲೆ ದಾಳಿಯಾಗಿದೆ. ಹೀಗಾಗಿ ದಾಳಿ ಹಿಂದೆ ರಾಜಕೀಯ ಷಡ್ಯಂತ್ರ ಅಡಗಿದೆ. ಕೂಡಲೇ ಅಧಿಕಾರಿಯನ್ನು ವರ್ಗಾವಣೆ ಮಾಡಬೇಕು ಎಂದು ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದರು.