ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ (ಚಿತ್ರಕೃಪೆ: ಕೆಪಿಸಿಸಿ ಕರ್ನಾಟಕ ಟ್ವಿಟರ್)
ಮೈಸೂರು: ಸರ್ಕಾರದಿಂದ ಯಾವುದೇ ಒಂದು ಸೌಲಭ್ಯ ನೀಡುವಾಗ ಜಾತಿ ಆಧಾರಿತ ತಾರತಮ್ಯ ಮಾಡುವುದೇಕೆ ಎಂದು ವಿದ್ಯಾರ್ಥಿನಿಯೊಬ್ಬಳು ಸಿಎಂ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದು, ಈ ವೇಳೆ ಸಿಎಂ ಸಿದ್ದರಾಮಯ್ಯ ನೀಡಿದ ಉತ್ತರ ಎಲ್ಲರ ಗಮನ ಸೆಳೆಯಿತು.
ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದು, ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ ಅವರೂ ಕೂಡ ಪಾಲ್ಗೊಂಡಿದ್ದರು. ಈ ವೇಳೆ ಹಲವು ವಿದ್ಯಾರ್ಥಿಗಳು ರಾಹುಲ್ ಗಾಂಧಿ ಅವರಿಗೆ ನಾನಾ ರೀತಿಯ ಪ್ರಶ್ನೆ ಕೇಳಿದರು. ರಾಹುಲ್ ಕೂಡ ಇದಕ್ಕೆ ಉತ್ತರಿಸಿದರು. ಸಂವಾದದ ನಡುವೆ ವಿದ್ಯಾರ್ಥಿನಿಯೊಬ್ಬಳು ಎದ್ದು ನಿಂತು ಸರ್ಕಾರವನ್ನು ಉದ್ದೇಶಿಸಿ ಸರ್ಕಾರಿ ಸೌಲಭ್ಯಗಳನ್ನು ನೀಡುವಾಗ ಜಾತಿ ಆಧಾರದ ಮೇಲೆ ತಾರತಮ್ಯ ಮಾಡುತ್ತೀರಲ್ಲ ಏಕೆ.. ಎಲ್ಲರೂ ಸಮಾನರೇ ಅಲ್ಲವೇ ಎಂದು ಪ್ರಶ್ನಿಸಿದಳು.
ಈ ಪ್ರಶ್ನೆಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ನಿಮ್ಮ ಸಿಎಂ ಇಲ್ಲೇ ಇದ್ದಾರೆ ಅವರನ್ನೇ ಕೇಳಿ ಎಂದು ಸಿದ್ದರಾಮಯ್ಯ ಅವರಿಗೆ ಮೈಕ್ ನೀಡಿದರು. ಆಗ ಎದ್ದು ನಿಂತು ವಿದ್ಯಾರ್ಥಿನಿ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ ಅವರು, ಜಾತಿ ಆಧಾರಿತ ತಾರಮತ್ಯ ಇಂದು, ನಿನ್ನೆಯದಲ್ಲ. ಅಥವಾ ನಾವು ನೀವು ಮಾಡಿರುವುದಲ್ಲ. ಹಿಂದಿನಿಂದಲೂ ಐತಿಹಾಸಿಕವಾಗಿ ಆಗಿದ್ದ ಕೆಲ ಘಟನೆಗಳಿಂದ ನಡೆದು ಬಂದದ್ದಾಗಿದೆ. ತಾರತಮ್ಯ ನಿವಾರಿಸಲು ಏನು ಮಾಡಬೇಕು..? ಈಗ ಒಂದು ಮನೆಯಲ್ಲಿ ಇಬ್ಬರು ಮಕ್ಕಳು ಇರುತ್ತಾರೆ.. ಒಂದು ಮಗು ದುರ್ಬಲವಾಗಿರುತ್ತದೆ. ಮತ್ತೊಂದು ಮಗು ಸದೃಢವಾಗಿರುತ್ತದೆ. ಆಗ ಆ ಮಕ್ಕಳ ಪೋಷಕರು ದುರ್ಬಲವಾಗಿರುವ ಮಗುವಿನತ್ತ ವಿಶೇಷ ಕಾಳಜಿ ತೋರಿಸಿ, ಹಾರೈಕೆ ಅದನ್ನೂ ಸದೃಢವಾಗಿಸಬೇಕಾಗುತ್ತದೆ.
ಅದೇ ರೀತಿ ಸರ್ಕಾರ ಕೂಡ ಸಮಾಜದಲ್ಲಿ ದುರ್ಬಲರಾಗಿರುವ ಮತ್ತು ಅವಕಾಶಗಳಿಂದ ವಂಚಿತರಾಗಿರುವ ಸಮುದಾಯಗಳನ್ನು ಗುರುತಿಸಿ ಅವರಿಗೆ ವಿಶೇಷ ಕಾಳಜಿ ಮತ್ತು ಅವಕಾಶಗಳನ್ನು ಸೃಷ್ಟಿ ಮಾಡಬೇಕಾಗುತ್ತದೆ. ಸರ್ಕಾರದ ಯೋಜನೆಗಳ ಮೂಲಕ ಹಿಂದುಳಿದವರನ್ನೂ ಕೂಡ ಮುಖ್ಯವಾಹಿನಿಗೆ ತರಬೇಕಾಗುತ್ತದೆ. ಆಗ ಮಾತ್ರ ಸರ್ವರಿಗೂ ಸಮಾನ ಸಮಾಜ ನಿರ್ಮಾಣ ಮಾಡಬಹುದಾಗಿದೆ. ಇಲ್ಲವೆಂದರೆ ಮತ್ತದೇ ಅಸಮಾನತೆ ಮುಂದುವರೆಯುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.