ರಾಜ್ಯ

ಪೊಲೀಸ್ ಗಸ್ತು ಹೆಚ್ಚಿಸಲು 312 ಬೊಲೆರೊವನ್ನು ಖರೀದಿಸಲಿರುವ ರಾಜ್ಯ ಸರ್ಕಾರ

Sumana Upadhyaya

ಬೆಂಗಳೂರು: ರಾಜ್ಯದಲ್ಲಿ ಭದ್ರತೆಯನ್ನು ಹೆಚ್ಚಿಸಲು ಮುಂದಾಗಿರುವ ರಾಜ್ಯ ಸರ್ಕಾರ ಪೊಲೀಸರ ಗಸ್ತು ತಿರುಗಲು 312 ಮಹೀಂದ್ರ ಬೊಲೆರೊ ಎಸ್ ಯುವಿಗಳನ್ನು ಖರೀದಿಸಲಿದೆ.

ಸುಮಾರು 20 ಕೋಟಿ ರೂಪಾಯಿ ವೆಚ್ಚದಲ್ಲಿ ಮಹೀಂದ್ರ ಬೊಲೆರೊವನ್ನು ಖರೀದಿಸಲು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಜನರಿಗೆ ಅಗತ್ಯವಿರುವಲ್ಲಿ, ಅಗತ್ಯ ಸಂದರ್ಭಗಳಲ್ಲಿ ಪೊಲೀಸರ ನೆರವು ಸಿಗಬೇಕೆಂಬುದು ಇದರ ಉದ್ದೇಶವಾಗಿದೆ. ರಾಜ್ಯ ಸಚಿವ ಸಂಪುಟ ಇದೇ ಸಮಯದಲ್ಲಿ ರಾಜ್ಯ ಸರ್ಕಾರದ ಸುಮಾರು 48 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್ ವಿತರಣೆ ಮಾಡುವ ಪ್ರಸ್ತಾವನೆಗೆ ಕೂಡ ಒಪ್ಪಿಗೆ ಸೂಚಿಸಿದೆ. ಒಂದನೇ ತರಗತಿಯಿಂದ 10ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಶೂ ವಿತರಣೆ ಮಾಡಲಾಗುತ್ತಿದ್ದು ಇದಕ್ಕೆ ಸುಮಾರು 130 ಕೋಟಿ ರೂಪಾಯಿ ವೆಚ್ಚ ತಗುಲಲಿದೆ.

ಕೋಲಾರದಲ್ಲಿ ಸದ್ಯದಲ್ಲಿಯೇ ಆಧುನಿಕ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣವಾಗಲಿದೆ. ಇದಕ್ಕಾಗಿ 16 ಎಕರೆ ಜಮೀನನ್ನು ನೀಡುವ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ತಿಳಿಸಿದ್ದಾರೆ.

ಬೀದರ್ ವಿಮಾನ ನಿಲ್ದಾಣದಿಂದ ನಾಗರಿಕ ವಿಮಾನಯಾನ ಕಾರ್ಯನಿರ್ವಹಣೆಯ ಅಡೆತಡೆಗಳನ್ನು ನಿವಾರಿಸಲು ರಾಜ್ಯ ಸಚಿವ ಸಂಪುಟ ಬೀದರ್ ವಿಮಾನ ನಿಲ್ದಾಣದ ನಾಗರಿಕ ಟರ್ಮಿನಲ್ ನ್ನು ಭೋಗ್ಯಕ್ಕೆ ನೀಡಲು ನಿರ್ಧರಿಸಿದೆ.

SCROLL FOR NEXT